ಪುಣೆ : ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ನೋವಿಗೊಳಗಾಗಿರುವ ಭಾರತ ತಂಡದ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಸರಣಿಯ ಮುಂದಿನ 2 ಏಕದಿನ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಜೊತೆಗೆ ಮೊದಲಾರ್ಧದ ಐಪಿಎಲ್ನಿಂದಲೂ ಹೊರಗುಳಿಯಬಹುದು ಎನ್ನಲಾಗುತ್ತಿದೆ.
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್‌ನ 8 ಓವರ್‌ನಲ್ಲಿ ಬೈರ್ಸ್ಟೋವ್ ಬಾರಿಸಿದ ಚೆಂಡನ್ನು ತಡೆದಿದ್ದ ಶ್ರೇಯಸ್ ಐಯ್ಯರ್ 2 ರನ್ ಉಳಿಸಿದ್ದರಾದರೂ ಡೈವ್ ಮಾಡಿದ ಪರಿಣಾಮ ಭುಜಕ್ಕೆ ಒತ್ತಡ ಬಿದ್ದು, ನೋವಿನಿಂದ ನರಳಾಡಿದ್ದರು. ತಕ್ಷಣ ಅವರನ್ನು ಪಿಸಿಯೋ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ವೈದ್ಯಕೀಯ ತಂಡ ಸ್ಕ್ಯಾನಿಂಗ್‌ಗೊಳಪಡಿಸಿತ್ತು.
ಭುಜದ ನೋವಿನಿಂದ ಬಳಲುತ್ತಿರುವ ಶ್ರೇಯಸ್ ಐಯ್ಯರ್ ಚೇತರಿಸಿಕೊಳ್ಳಲು ಕೆಲ ವಾರಗಳೇ ಬೇಕಾಗಬಹುದು ಎಂದು ತಿಳಿದು ಬಂದಿದೆ. ಈ ವಿಷಯ ಮೂಲಗಳಿಂದ ತಿಳಿದು ಬಂದಿದೆಯಾದರೂ ಬಿಸಿಸಿಐ ಇನ್ನಷ್ಟೇ ಖಚಿತಪಡಿಸಬೇಕಿದೆ.
ಏಪ್ರಿಲ್ 9ರಿಂದ ಐಪಿಎಲ್ ಆರಂಭವಾಗಲಿದೆ. ಮೊದಲ ಕೆಲ ಪಂದ್ಯಗಳಿಗೆ ಶ್ರೇಯಸ್ ಐಯ್ಯರ್ ಆಡುವುದು ಅನುಮಾನ ಎನ್ನಲಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಿದ್ದ ಶ್ರೇಯಸ್ ಐಯ್ಯರ್ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು. ಒಂದು ವೇಳೆ ಶ್ರೇಯಸ್ ಐಪಿಎಲ್ನಿಂದ ಹೊರಗುಳಿದರೇ ಉಪ ನಾಯಕನಾಗಿರುವ ರಿಷಭ್ ಪಂತ್ ತಂಡ ಮುನ್ನಡೆಸುವ ಸಾಧ್ಯತೆಯಿದೆ.
ಅಯ್ಯರ್ ಭುಜದ ನೋವಿಗೆ ತುತ್ತಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿ ವೇಳೆ ಕೂಡ ಭುಜದ ಗಾಯಕ್ಕೊಳಗಾಗಿದ್ದರು. ನಂತರ ಚೇತರಿಸಿಕೊಂಡು ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ತಂಡ ಸೇರುವ ಮುನ್ನ ವಿಜಯ್ ಹಜಾರೆ ಟ್ರೋಪಿಯಲ್ಲಿ ಮುಂಬೈ ತಂಡ ಮುನ್ನಡೆಸಿದ್ದರು. ಅವರು 4 ಪಂದ್ಯಗಳಲ್ಲಿ 2 ಶತಕ ಸಿಡಿಸಿ ಮಿಂಚಿದ್ದರು.
ಇದನ್ನು ಓದಿ:"ಅಂತಾರಾಷ್ಟ್ರೀಯ ಕ್ರಿಕೆಟ್ ಒತ್ತಡ ನಿಭಾಯಿಸುವುದು ನನಗೆ ತಿಳಿದಿದೆ": ಧವನ್