ಸಿಡ್ನಿ: ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ ಭಾರತ ವಿರುದ್ಧದ 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅವರು ಮರಳುತ್ತಿರುವುದರಿಂದ ತಂಡದ ಬಲ ಹೆಚ್ಚಾಗಲಿದೆ ಮತ್ತು ಅವರು ತಂಡದ ಇತರೆ 10 ಆಟಗಾರರಲ್ಲೂ ಉತ್ಸಾಹ ಮತ್ತು ಶಕ್ತಿಯನ್ನು ತುಂಬಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ತಿಳಿಸಿದ್ದಾರೆ.
ಗಾಯದ ಕಾರಣ ಭಾರತದ ವಿರುದ್ಧ ತವರಿನಲ್ಲಿ ನಡೆದ ಬಹುಪಾಲು ಪಂದ್ಯಗಳನ್ನು ವಾರ್ನರ್ ತಪ್ಪಿಸಿಕೊಂಡಿದ್ದಾರೆ. ಅವರು 2ನೇ ಏಕದಿನ ಪಂದ್ಯದಲ್ಲಿ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ನಂತರ 1 ಏಕದಿನ, 2 ಟಿ-20 ಹಾಗೂ 2 ಟೆಸ್ಟ್ ಪಂದ್ಯಗಳಿಂದ ಹೊರಗಿರಬೇಕಾಯಿತು. ಇದೀಗ ಚೇತರಿಸಿಕೊಂಡಿರುವ ಅವರು ಸಿಡ್ನಿಯಲ್ಲಿ ನಡೆಯುವ 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದ್ದು, ತಂಡ ಕಳೆದ 2 ಪಂದ್ಯಗಳಲ್ಲಿ ಭಾರಿ ವೈಫಲ್ಯ ಅನುಭವಿಸಿರುವ ಆರಂಭಿಕ ಸ್ಲಾಟ್ಗೆ ಬಲ ಬಂದಿದೆ ಎಂದು ನಾಯಕ ಪೇನ್ ತಿಳಿಸಿದ್ದಾರೆ.
"ಡೇವಿಡ್ ವಾರ್ನರ್ ಮರಳಿ ಬಂದಾಗ ಖಂಡಿತಾ ಎದುರಾಳಿ ತಂಡಕ್ಕೆ ಒತ್ತಡ ಹೆಚ್ಚಾಗುತ್ತದೆ. ನಾವು ಯಾರೇ ಆಡುತ್ತಿದ್ದರೂ ವಾರ್ನರ್ ತಂಡ ಸೇರಿಕೊಂಡಾಗ ಮಾತ್ರ ನಮ್ಮ ತಂಡ ಅತ್ಯಂತ ಬಲಿಷ್ಠವಾಗಿರುತ್ತದೆ. ಅದು ಅವರು ರನ್ ಗಳಿಸುವುದರಿಂದಾಗಬಹುದು ಅಥವಾ ಅವರು ತಂಡಕ್ಕೆ ತರುವ ಶಕ್ತಿಯಿಂದಾಗಬಹುದು" ಎಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಪೇನ್ ತಿಳಿಸಿದ್ದಾರೆ.
ಮಾರ್ನಸ್ ಲಾಬುಶೇನ್ ಮತ್ತು ಸ್ಟೀವ್ ಸ್ಮಿತ್ ಜೊತೆ ಮಧ್ಯಮ ಕ್ರಮಾಂಕವನ್ನು ರಕ್ಷಣೆ ಮಾಡಲಿದ್ದಾರೆ. ಆಗ ಎದುರಾಳಿ ಬೌಲರ್ಗಳು ದಣಿದಿದ್ದಾಗ ನಂತರ ಬರುವ ಬ್ಯಾಟ್ಸ್ಮನ್ಗಳಿಗೆ ಅನುಕೂಲವಾಗಲಿದೆ. ಡೇವಿಡ್ ತಂಡದಲ್ಲಿ ಬಹುದೊಡ್ಡ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಆಸೀಸ್ ನಾಯಕ ಹಿರಿಯ ಆರಂಭಿಕ ಬ್ಯಾಟ್ಸ್ಮನ್ ಬಗ್ಗೆ ಗುಣಗಾನ ಮಾಡಿದ್ದಾರೆ.
ಇದನ್ನು ಓದಿ: ತೃತೀಯ ಟೆಸ್ಟ್ಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ, ನವದೀಪ್ ಸೈನಿಗೆ ಸ್ಥಾನ!