ಸಿಡ್ನಿ: ಮೊದಲ ಟೆಸ್ಟ್ನ ನಂತರ ಭಾರತ ಟೆಸ್ಟ್ ತಂಡದಲ್ಲಿ ರಿಷಭ್ ಪಂತ್ ಆಡಬೇಕೆಂದು ಕರೆ ನೀಡಿದ್ದ ರಿಕಿ ಪಾಂಟಿಂಗ್, ಅವರ ವಿಕೆಟ್ ಕೀಪಿಂಗ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ಪಂತ್ ಕೇವಲ ಮೂರು ಓವರ್ಗಳ ಅಂತರದಲ್ಲಿ ವಿಲ್ ಪುಕೋವ್ಸ್ಕಿ ಅವರ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ಪಾಂಟಿಂಗ್ ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲು ಅಶ್ವಿನ್ ಬೌಲಿಂಗ್ನಲ್ಲಿ ಔಟ್ಸೈಡ್ ಆದ ಚೆಂಡು ಹಿಡಿಯುವಲ್ಲಿ ವಿಫಲರಾಗಿದ್ದ ಪಂತ್, ನಂತರ ವೇಗಿ ಸಿರಾಜ್ ಬೌಲಿಂಗ್ನಲ್ಲೂ ಸುಲಭ ಕ್ಯಾಚ್ ಕೈಚೆಲ್ಲಿದರು. ಇದರಿಂದ ಭಾರತೀಯ ಹಿರಿಯ ಕ್ರಿಕೆಟಿಗರು, ಅಭಿಮಾನಿಗಳು ಪಂತ್ ಕೀಪಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ ಕೋಚ್ ಆಗಿರುವ ರಿಕಿ ಪಾಂಟಿಂಗ್ ಕೂಡ ಪಂತ್ ವಿಕೆಟ್ ಕೀಪಿಂಗ್ ಬಗ್ಗೆ ಬೇಸರದ ಮಾತನಾಡಿದ್ದಾರೆ.
ಪಂತ್ ಒಂದೇ ದಿನ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಅವರು ಕೈಚೆಲ್ಲಿದ ಕ್ಯಾಚ್ಗಳು ಅಂತಹ ಕಠಿಣವೇನೂ ಆಗಿರಲಿಲ್ಲ. ಪಂತ್ ಅದೃಷ್ಟವೆಂದರೆ, ಪುಕೊವ್ಸ್ಕಿ ಸಿಕ್ಕ ಅವಕಾಶದಿಂದ ದೊಡ್ಡ ಸ್ಕೋರ್ ಮಾಡಲಿಲ್ಲ. ಒಂದು ವೇಳೆ ಅವರು ಶತಕ, ದ್ವಿಶತಕ ಬಾರಿಸಿದ್ದರೆ, ಪಂತ್ ತಮ್ಮನ್ನು ತಾವು ದೂಷಿಸಿಕೊಳ್ಳಲೇ ಬೇಕಾಗಿತ್ತು ಎಂದು ಕ್ರಿಕೆಟ್ ಡಾಟ್ಕಾಮ್ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ಬಹಳ ದೀರ್ಘ ಸಮಯದಿಂದೂಲೂ ಬ್ಯಾಟಿಂಗ್ಗಿಂತ ರಿಷಭ್ ವಿಕೆಟ್ ಕೀಪಿಂಗ್ನಲ್ಲಿ ಸುಧಾರಣೆಯಾಗಬೇಕೆಂದು ಹೇಳುತ್ತಿದ್ದೇನೆ. ಅವರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಗಮನಿಸಿದರೆ, ವಿಶ್ವದ ಇತರ ಕೀಪರ್‌ಗಳಿಗಿಂತ ಹೆಚ್ಚಿನ ಕ್ಯಾಚ್‌ಗಳನ್ನು ಕೈಬಿಟ್ಟಿರುವ ವಿಕೆಟ್ ಕೀಪರ್ ಆಗಿದ್ದಾರೆ. ಹಾಗಾಗಿ ಅವರು ವಿಕೆಟ್ ಕೀಪಿಂಗ್ ಮೇಲೆ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಪಾಂಟಿಗ್ ಹೇಳಿದ್ದಾರೆ.
ಇದನ್ನು ಓದಿ:ಅವರೇ ನನಗೆ ಮಾದರಿ, ಅವರಂತಾಗಬೇಕು ಅನ್ನೋದೇ ನನ್ನ ಕನಸು: ಚಹಾಲ್