ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಟಿ-20 ಕ್ರಿಕೆಟ್ ಬಂದ ಮೇಲೆ ಟೆಸ್ಟ್ ಕ್ರಿಕೆಟ್ ತನ್ನ ಅಸ್ತಿತ್ವ ಕಳೆದುಕೊಳ್ತಾ ಬರುತ್ತಿದೆ. ಇದೀಗ ಟೆಸ್ಟ್ ಕ್ರಿಕೆಟ್ ಅನ್ನು ಮತ್ತೆ ಜನತೆಯ ಮುಂದೆ ಕೊಂಡೊಯ್ಯಲು ನಿರ್ಧರಿಸಿರುವ ಐಸಿಸಿ ಈಗಾಗಲೇ 9 ರಾಷ್ಟ್ರಗಳ ಟೆಸ್ಟ್ ಚಾಂಪಿಯನ್ ಶಿಪ್ ನಡೆಸಲು ನಿರ್ಧರಿಸಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.
2009ರಲ್ಲಿ ಶುರುವಾದ ಈ ಟೆಸ್ಟ್ ಚಾಂಪಿಯನ್ ಶಿಪ್ಗೆ 2019ರಲ್ಲಿ ಐಸಿಸಿಯಿಂದ ಮನ್ನಣೆ ಸಿಕ್ಕಿದೆ. ಶತಮಾನದ ಇತಿಹಾಸವುಳ್ಳ ಟೆಸ್ಟ್ ಕ್ರಿಕೆಟ್ ನಶಿಸಿ ಹೋಗುವುದನ್ನು ತಡೆಯಲು ಟೆಸ್ಟ್ ಚಾಂಪಿಯನ್ಶಿಪ್ ಆರಂಭಿಸಲಿದ್ದು, ಇದರ ಮೂಲಕವಾದರೂ ಯುವಪೀಳಿಗೆಯನ್ನು ಟೆಸ್ಟ್ ಕ್ರಿಕೆಟ್ನತ್ತ ಸೆಳೆಯಲು ಐಸಿಸಿ ನಿರ್ಧರಿಸಿದೆ.
ಏನಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್?
ಟಿ20, ಟಿ-10ನಂತಹ ವೇಗದ ಕ್ರಿಕೆಟ್ ಮುಂದೆ ನಿಧಾನಗತಿಯ ಟೆಸ್ಟ್ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಕಾರಣದಿಂದ ಐಸಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಚಾಂಪಿಯನ್ಶಿಪ್ ಆರಂಭಿಸಿದೆ. ಎರಡು ವರ್ಷಗಳ ಕಾಲ ನಡೆಯುವ ಈ ಸುದೀರ್ಘ ಚಾಂಪಿಯನ್ಶಿಪ್ನಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದ ಪಟ್ಟಿ ಅವಕಾಶ ಪಡೆದಿರುವ ಎಲ್ಲಾ ತಂಡಗಳು ಭಾಗವಹಿಸಲಿವೆ.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳೆಷ್ಟು?
ಐಸಿಸಿ ಈ ಬಾರಿ ಚಾಂಪಿಯನ್ಶಿಪ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಟಾಪ್ 9 ತಂಡಗಳಿಗೆ ಅವಕಾಶ ನೀಡಿದೆ. ಈ ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಲಿವೆ. ಜಿಂಬಾಬ್ವೆ ಹಾಗೂ ಈಗಷ್ಟೇ ಟೆಸ್ಟ್ ಕ್ರಿಕೆಟ್ ಮಾನ್ಯತೆ ಪಡೆದುಕೊಂಡಿರುವ ಐರ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಈ ಆವೃತ್ತಿಯನ್ನು ಮಿಸ್ ಮಾಡಿಕೊಳ್ಳಲಿವೆ.
ಟೆಸ್ಟ್ ಚಾಂಪಿಯನ್ ಶಿಪ್ ಹೇಗೆ ನಡೆಯಲಿದೆ?
ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಪ್ರತಿ ತಂಡಗಳು ಎರಡು ವರ್ಷಗಳ ಅವಧಿಯಲ್ಲಿ 6 ಸರಣಿಗಳನ್ನು ಆಡಲಿವೆ. ಮೂರು ಸರಣಿ ಸ್ವದೇಶದಲ್ಲಿ ಹಾಗೂ ವಿದೇಶಗಳಲ್ಲಿ ಮೂರು ಸರಣಿಯಾಡಲಿವೆ. ಪ್ರತಿ ಸರಣಿಯಲ್ಲಿ 2 ರಿಂದ 5 ಪಂದ್ಯಗಳು ನಡೆಯಲಿವೆ. ತಂಡ ಸ್ವದೇಶದಲ್ಲಿ ಮತ್ತು ವಿದೇಶಗಳಲ್ಲಿ ಯಾವ ತಂಡಗಳ ಜೊತೆ ಆಡಲಿದೆ ಎಂಬುದನ್ನು ಆಯಾ ತಂಡಗಳೇ ನಿರ್ಧರಿಸಲಿವೆ.
ಎರಡು ವರ್ಷದ ಅವಧಿಯಲ್ಲಿ ನಡೆಯುವ ಎಲ್ಲಾ ಟೆಸ್ಟ್ ಸರಣಿಗಳು ಚಾಂಪಿಯನ್ಶಿಪ್ಗೆ ಒಳಪಡುವುದಿಲ್ಲ. ಏಕಂದರೆ ಐರ್ಲೆಂಡ್, ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ತಂಡಗಳು ಟೆಸ್ಟ್ ಚಾಂಪಿಯನ್ಶಿಪ್ಗೆ ಒಳಪಟ್ಟಿಲ್ಲವಾದ್ದರಿಂದ ಅವುಗಳ ವಿರುದ್ಧ ನಡೆಯುವ ಪಂದ್ಯಗಳನ್ನು ಚಾಂಪಿಯನ್ಶಿಪ್ಗೆ ಪರಿಗಣಿಸುವುದಿಲ್ಲ.
ವಿನ್ನರ್ ಘೋಷಣೆ ಹೇಗೆ?
ಪ್ರತಿಯೊಂದು ಸರಣಿಯಲ್ಲಿ ತಂಡಗಳ ಯಾವ ರೀತಿ ಪ್ರದರ್ಶನ ನೀಡುತ್ತವೆ ಎಂಬುದರ ಆಧಾರದ ಮೇಲೆ ಅಂಕಗಳನ್ನು ಪಡೆಯಲಿವೆ. ಒಂದು ಸರಣಿಯಲ್ಲಿ 120 ಅಂಕಗಳಿದ್ದು 2 ವರ್ಷದ ಅವಧಿಯಲ್ಲಿ 720 ಅಂಕಗಳನ್ನು ಮೀಸಲಿಡಲಾಗಿದೆ. ಸರಣಿಯಲ್ಲಿ ಕಡಿಮೆ ಎಂದರೆ 2 ಟೆಸ್ಟ್, ಹೆಚ್ಚು ಅಂದರೆ 5 ಟೆಸ್ಟ್ ಪಂದ್ಯಗಳು ನಡೆಯಲಿದೆ. ಅಂಕಗಳೂ ಸಹಾ ಸರಣಿಯಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬುದರ ಮೇಲೆ ನಿರ್ಣಯವಾಗಲಿದೆ.
ಫೈನಲ್ಗೇರುವ ತಂಡಗಳ ಆಯ್ಕೆ ಹೇಗೆ?
2 ವರ್ಷಗಳ ಕಾಲ ನಡೆಯುವ ಈ ಮಹಾನ್ ಸಮರದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳೂ ಅವಕಾಶ ಪಡೆಯಲಿವೆ. ಒಂದು ವೇಳೆ ಫೈನಲ್ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಯಾವ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುತ್ತದೆಯೋ ಆ ತಂಡವನ್ನು ಟೆಸ್ಟ್ ಚಾಂಪಿಯನ್ ಎಂದು ಘೋಷಣೆ ಮಾಡಲಾಗುತ್ತದೆ.