ಲಂಡನ್: ವಿಶ್ವಕಪ್ ಶುರುವಾಗಿ ಇಂದಿಗೆ 26 ದಿನಗಳು ಕಳೆದಿವೆ. ಇಷ್ಟು ದಿನಗಳಲ್ಲಿ 5 ಪಂದ್ಯಗನ್ನಾಡಿದ ಭಾರತ ತಂಡಕ್ಕೆ ಮುಂದಿನ 10 ದಿನಗಳಲ್ಲಿ 4 ಪಂದ್ಯಗಳನ್ನಾಡಬೇಕಿದೆ.
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿರುವ ಭಾರತ ಮುಂದಿನ ಪಂದ್ಯಗಳಲ್ಲಿ ವಿಂಡೀಸ್, ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳನ್ನು ಎದುರಿಸಬೇಕಿದೆ.
ಈಗಾಗಲೇ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಬಿಟ್ಟರೆ ಎಲ್ಲ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಸೋಲಿಲ್ಲದ ಸರದಾರನಾಗಿದೆ. ಆದರೆ, ಮುಂದಿನ ಪಂದ್ಯಗಳು ಒಂದರ ಹಿಂದೆ ಒಂದು ಬರಲಿದ್ದು, ಭಾರತ ತಂಡಕ್ಕೆ ವಿಶ್ರಾಂತಿ ರಹಿತವಾಗಿ ಆಡಬೇಕಾಗಿದೆ.
ಕೊಹ್ಲಿ ಪಡೆ 27 ರಂದು ವಿಂಡೀಸ್ ವಿರುದ್ಧ, 30 ರಂದು ಇಂಗ್ಲೆಂಡ್ ವಿರುದ್ಧ, ಜುಲೈ 2 ರಂದು ಬಾಂಗ್ಲಾದೇಶ ಹಾಗೂ ಜುಲೈ 6 ರಂದು ಶ್ರೀಲಂಕಾ ವಿರುದ್ಧ ಕಾದಾಡಲಿದೆ.
ವಿಶ್ವಕಪ್ನಂತ ಮಹಾ ಟೂರ್ನಿಯಲ್ಲಿ ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಬಿಡುವಿಲ್ಲದೇ ನಡೆಸುವುದರಿಂದ ಆಟಗಾರರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ. ಈಗ ಗೆದ್ದಿರುವ ಪಂದ್ಯಗಳಲ್ಲಿ ಭಾರತ ಅದ್ಭುತ ಫೀಲ್ಡಿಂಗ್ ಪ್ರದರ್ಶನ ತೋರಿದೆ. ಆದರೆ ಮುಂದಿನ ಪಂದ್ಯಗಳು ವಿಶ್ರಾಂತಿಯಿಲ್ಲದೇ ಆಡುವುದು ಕೊಹ್ಲಿ ಪಡೆಗೆ ದೊಡ್ಡ ಸವಾಲಾಗಲಿದೆ.