ಕ್ರೈಸ್ಟ್ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ವಿರಾಟ್ ಮೊದಲ ಇನ್ನಿಂಗ್ಸ್ನಲ್ಲಿ 2 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 19 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಕಳಪೆ ಪ್ರದರ್ಶನವೇ ಅವರ ಕುಸಿತಕ್ಕೆ ಕಾರಣವಾಗಿದೆ. ಕೊಹ್ಲಿ ಈ ಪಂದ್ಯಕ್ಕೂ ಮುನ್ನ 923 ರೇಟಿಂಗ್ ಪಾಯಿಂಟ್ ಹೊಂದಿದ್ದರು. ಇದೀಗ 906ಕ್ಕೆ ಕುಸಿದಿದೆ. ಇನ್ನು 911 ಅಂಕ ಹೊಂದಿರುವ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಭಾರತದ ವಿರುದ್ಧ 89 ರನ್ಗಳಿಸಿ ಮಿಂಚಿದ್ದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಒಂದು ಸ್ಥಾನ ಏರಿಕೆ ಕಂಡಿದ್ದು, 3ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ (827) ಹಾಗೂ 5ನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಜಮ್ (800) ಇದ್ದಾರೆ.
ಕರ್ನಾಟಕದ ಮಯಾಂಕ್ ಅಗರ್ವಾಲ್ 2 ಸ್ಥಾನ ಏರಿಕೆ ಕಾಣುವ ಮೂಲಕ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಮತ್ತಿಬ್ಬರು ಭಾರತೀಯರಾದ ಅಜಿಂಕ್ಯಾ ರಹಾನೆ ಒಂದು ಸ್ಥಾನ ಮೇಲೇರಿದ್ದು 8ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 9ರಲ್ಲಿ ಕಾಣಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಜೋ ರೂಟ್ ಟಾಪ್ 10ರಲ್ಲಿ ಕಾಣಿಸಿಕೊಂಡಿರುವ ಮತ್ತಿಬ್ಬರು ಬ್ಯಾಟ್ಸ್ಮನ್ಗಳಾಗಿದ್ದಾರೆ.