ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ಆಟಗಾರರು ಐಸಿಸಿ ಟಿ-20 ರ‍್ಯಾಂಕಿಂಗ್‌ನಲ್ಲಿ ಭಾರಿ ಏರಿಕೆ ಕಂಡಿದ್ದಾರೆ.
ಕಿವೀಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಕೂಡ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಫಿಂಚ್ ರೇಟಿಂಗ್ ಅಂಕ ಹೆಚ್ಚಿಸಿಕೊಂಡು ರಾಹುಲ್ ಸನಿಹ ಬಂದಿದ್ದಾರೆ. ರಾಹುಲ್ 823 ಅಂಕ ಪಡೆದಿದ್ದರೆ, ಫಿಂಚ್ 820 ಅಂಕ ಪಡೆದಿದ್ದಾರೆ.
ಇನ್ನು ಹರಿಣಗಳ ವಿರುದ್ಧ 2 ಅರ್ಧಶತಕ ಸಿಡಿಸಿದ ವಾರ್ನರ್ 25ರಿಂದ 18ನೇ ಸ್ಥಾನಕ್ಕೆ, ಕಳೆದ 6 ಇನ್ನಿಂಗ್ಸ್ಗಳಲ್ಲಿ 250 ರನ್ ಸಿಡಿಸಿರುವ ಸ್ಮಿತ್ 53ನೇ ಸ್ಥಾನದಿಂದ 25ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಕೂಡ ಆಸ್ಟ್ರೇಲಿಯಾ ಬೌಲರ್ಗಳು ಉತ್ತಮ ಸಾಧನೆ ಮೆರೆದಿದ್ದಾರೆ. ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಆಶ್ಟನ್ ಅಗರ್ 8 ವಿಕೆಟ್ಗಳೊಂದಿಗೆ ಸರಣಿಯಲ್ಲಿ ಟಾಪ್ ಬೌಲರ್ ಆಗಿದ್ದರು. ಅವರು 6 ಸ್ಥಾನ ಮೇಲೇರಿದ್ದು, 10ರಿಂದ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಅವರ ಸಹ ಬೌಲರ್ ಆ್ಯಡಂ ಜಂಪಾ 4ರಿಂದ 3ನೇ ಸ್ಥಾನಕ್ಕೆ, ಮಿಚೆಲ್ ಸ್ಟಾರ್ಕ್ 15 ಸ್ಥಾನ ಏರಿಕೆ ಕಂಡು 24ಕ್ಕೆ, ಕಮಿನ್ಸ್ 21ರಿಂದ 18ಕ್ಕೆ, ಕೇನ್ ರಿಚರ್ಡ್ಸನ್ 24ರಿಂದ 11ಕ್ಕೆ ಬಡ್ತಿ ಪಡೆದಿದ್ದಾರೆ.