ಮುಂಬೈ: ಸೋಮವಾರ ಬಿಡುಗಡೆಗೊಂಡಿರುವ ಟಿ20 ನೂತನ ಟಿ20 ರ‍್ಯಾಂಕಿಂಗ್‌ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ತಮ್ಮ 2ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇತ್ತೀಚೆಗೆ ಮುಗಿದ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕರ್ನಾಟಕ ಬ್ಯಾಟ್ಸ್ಮನ್ 224 ರನ್ಗಳಿಸುವ ಮೂಲಕ ಭಾರತಕ್ಕೆ 5-0 ಅಂತರದ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ 823 ಅಂಕಗಳೊಂದಿಗೆ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕೊಹ್ಲಿ 673 ಅಂಕಗಳೊಂದಿಗೆ 10 ನೇ ಸ್ಥಾನಕ್ಕೆ ಕುಸಿದ್ದಿದ್ದಾರೆ. ರೋಹಿತ್ ಶರ್ಮಾ 11ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಇಂಗ್ಲೆಂಡ್ ಕ್ಯಾಪ್ಟನ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದು ಕೊಹ್ಲಿಯ 9ನೇ ಸ್ಥಾನಕ್ಕೆ ಅಕ್ರಮಿಸಿಕೊಂಡಿದ್ದಾರೆ. ಇನ್ನು ಇದೇ ಟೂರ್ನಿಯಲ್ಲಿ ಮಿಂಚಿದ ಜಾಸನ್ ರಾಯ್ 6 ಸ್ಥಾನ ಬಡ್ತಿಪಡೆದು 14 ಸ್ಥಾನಕ್ಕೂ, ಬೈರ್ಸ್ಟೋವ್ 15 ಸ್ಥಾನ ಏರಿಕೆ ಪಡೆದು 23ನೇ ಸ್ಥಾನ ಪಡೆದಿದ್ದಾರೆ.
ದ.ಆಫ್ರಿಕಾ ತಂಡದ ನೂತನ ನಾಯಕ ಕ್ವಿಂಟನ್ ಡಿಕಾಕ್ 11 ಸ್ಥಾನ ಮೇಲೇರಿ 16ನೇ ಸ್ಥಾನ ಪಡೆದಿದ್ದಾರೆ.
ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಜಂ (879) ಮುಂದುವರಿದಿದ್ದರೆ, ಆ್ಯರೋನ್ ಫಿಂಚ್, ಕಾಲಿನ್ ಮುನ್ರೊ, ಗ್ಲೇನ್ ಮ್ಯಾಕ್ಸ್‌ವೆಲ್ 3, 4 ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.