ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದ 3ನೇ ದಿನ ಭಾರತೀಯ ವೇಗದ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಎಸ್ಸಿಜಿಯಲ್ಲಿ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಧಿಕಾರಿಗಳು ಆರೋಪಿಸಿದ ಬೆನ್ನಲ್ಲೆ ಈ ವಿಚಾರವಾಗಿ ಐಸಿಸಿ ತನಿಖೆಗೆ ಸಿದ್ದವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವರದಿಯಾದ ತಕ್ಷಣ, ಐಸಿಸಿ ಕಾರ್ಯಪ್ರವೃತ್ತವಾಗಿದ್ದು, ಆರೋಪಿಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಆಸಿಸ್ ಪತ್ರಿಕೆ 'ಸಿಡ್ನಿ ಮಾರ್ನಿಗ್ ಹೆರಾಲ್ಡ್' ವರದಿ ಮಾಡಿದೆ. ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ನಿರ್ವಾಹಕರು, ನ್ಯೂ ಸೌತ್ ವೇಲ್ಸ್ ಅಧಿಕಾರಿಗಳು ಹಾಗೂ ಐಸಿಸಿ, ಘಟನೆಗೆ ಕಾರಣವಾದ ಜನರನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿವೆ. ಬೌಂಡರಿ ಬಳಿ ನಿಂತಿದ್ದ ಓರ್ವ ಸಿಬ್ಬಂದಿ ಸಹ ನಿಂದನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಎಸ್‌ಸಿಜಿಗೆ ಮೈದಾನದ ಸುತ್ತಲೂ 800 ಕ್ಕೂ ಹೆಚ್ಚು ಭದ್ರತಾ ಕ್ಯಾಮೆರಾಗಳಿವೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಆಗಮಿಸಿದ ಎಲ್ಲಾ 10,075 ಪ್ರೇಕ್ಷಕರ ಬಗ್ಗೆ ಅಧಿಕಾರಿಗಳು ಸರಿಯಾದ ವಿವರಗಳನ್ನು ಹೊಂದಿದ್ದಾರೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಐಸಿಸಿಗೆ ಲಭ್ಯವಾಗಲಿವೆ ಎಂದು ವರದಿಯಾಗಿದೆ.
"ಕಳೆದ ಎರಡು ದಿನಗಳಿಂದ ಭಾರತೀಯ ಜೋಡಿ (ಬುಮ್ರಾ-ಸಿರಾಜ್)ಯನ್ನು ಪಂದ್ಯ ವೀಕ್ಷಣೆಗೆ ಬಂದಿರುವ ಸಾರ್ವಜನಿಕರು ಜನಾಂಗೀಯವಾಗಿ ನಿಂದಿಸುತ್ತಿದ್ದಾರೆ ಎಂದು ಬಿಸಿಸಿಐ ಆಧಿಕಾರಿಗಳು ಆರೋಪಿಸಿದ್ದಾರೆಂದು" ಆಸ್ಟ್ರೇಲಿಯನ್ ಪತ್ರಿಕೆ 'ದ ಡೈಲಿ ಟೆಲಿಗ್ರಾಫ್' ವರದಿ ಮಾಡಿದೆ.
ಸಿರಾಜ್ ಫೈನ್ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರಿಂದ ನಿಂದನೆಗೊಳಗಾದರೆ, ಬುಮ್ರಾ ಔಟ್ಫೀಲ್ಡ್ನಲ್ಲಿ ನಿಂತಿದ್ದ ವೇಳೆ ಕೆಲವು ಪ್ರೇಕ್ಷಕರು ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಭಾರತೀಯ ಸಿಬ್ಬಂದಿಗಳು ಬುಮ್ರಾ ಇದ್ದ ಸ್ಥಳಕ್ಕೆ ತೆರಳಿ ಈ ಕುರಿತು ಬುಮ್ರಾ ಜೊತೆಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಜನಾಂಗೀಯ ನಿಂದನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಂಡನೆ: ಯಾವುದೇ ರೀತಿಯ ತಾರತಮ್ಯ ಅಥವಾ ಜನಾಂಗೀಯ ನಿಂದನೆಯ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಅತ್ಯಂತ ಕಠಿಣ ನಿಲುವನ್ನು ಹೊಂದಿದೆ. ಇಂಥ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಮಂಡಳಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ.