ನವದೆಹಲಿ: ಟೀಂ ಇಂಡಿಯಾ ಸ್ಫೋಟಕ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ, ನಾನು ಕ್ರಿಕೆಟ್‌ಗಿಂತ ಹೆಚ್ಚಾಗಿ ಫುಟ್‌ಬಾಲ್ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಲಾ ಲಿಗಾ ಬ್ರಾಂಡ್ ಅಂಬಾಸಿಡರ್ ರೋಹಿತ್ ಶರ್ಮಾ, ಲಾ ಲಿಗಾದ ಅಧಿಕೃತ ಹ್ಯಾಂಡಲ್‌ನಲ್ಲಿ ಜೋ ಮಾರಿಸನ್ ಅವರೊಂದಿಗೆ ಫೇಸ್‌ಬುಕ್ ಲೈವ್ ನಡೆಸಿದ್ದು, ಈ ವೇಳೆ ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ.
ನಾನು ಫುಟ್‌ಬಾಲ್ ಅನ್ನು ಹೆಚ್ಚು ಫಾಲೋ ಮಾಡುತ್ತೇನೆ. ಕ್ರಿಕೆಟ್‌ಗಿಂತ ಹೆಚ್ಚಾಗಿ ಫುಟ್‌ಬಾಲ್ ನೋಡುತ್ತೇನೆ. ಮನೆಯಲ್ಲಿದ್ದಾಗ ಕ್ರಿಕೆಟ್ ಅನ್ನು ಅಷ್ಟಾಗಿ ನೋಡುವುದಿಲ್ಲ. ಫುಟ್‌ಬಾಲ್ ನೋಡುವಾಗ ಅದು ಕಣ್ಣಿಗೆ ಹಬ್ಬದಂತಿರುತ್ತದೆ. ಇದೊಂದು ಕೌಶಲ್ಯಪೂರ್ಣ ಕ್ರೀಡೆಯಾಗಿದ್ದು, ಅದಕ್ಕಾಗಿಯೇ ಹೆಚ್ಚು ಪ್ರೀತಿಸುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.
ನೀವು ಫುಟ್‌ಬಾಲ್ ಆಡುವುದಾದರೆ ಯಾವ ಸ್ಥಾನದಲ್ಲಿ ಆಡಲು ಬಯಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್, ನಾನು ಫುಟ್‌ಬಾಲ್ ಆಡಬೇಕಾದರೆ ಬಹುಶಃ ಮಿಡ್‌ಫೀಲ್ಡ್‌ನಲ್ಲಿ ಆಡುತ್ತೇನೆ. ನಾನು ಹೆಚ್ಚು ಓಡಲು ಬಯಸುವುದಿಲ್ಲ. ಆ ಸ್ಥಾನದಲ್ಲಿ ಗೋಲು ಗಳಿಸಲು ನೀವು ಅವಕಾಶಗಳನ್ನು ಸೃಷ್ಟಿಸಬೇಕಾಗಿರುವುದರಿಂದ ಕೌಶಲ್ಯಪೂರ್ಣವಾಗಿರಬೇಕು ಎಂದಿದ್ದಾರೆ.
ಭಾರತದಲ್ಲಿ ಸಾಕಷ್ಟು ಫುಟ್‌ಬಾಲ್ ಅಭಿಮಾನಿಗಳಿದ್ದು, ಲಾ ಲಿಗಾವನ್ನು ವೀಕ್ಷಿಸುತ್ತಾರೆ. ಒಂದು ಬಾರಿ ಕ್ರೀಡೆ ಕ್ರೀಡೆ ಪುನಾರಂಭವಾದರೆ ಅದೇ ತೀವ್ರತೆ ಇರುತ್ತದೆ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.