ಕೋಲ್ಕತ್ತಾ: ಟೆಸ್ಟ್ ಕ್ರಿಕೆಟ್ನಲ್ಲಿ ರಾರಾಜಿಸುತ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಹೊಗಳಿಕೆಯ ಜೊತೆಗೆ ಮಯಾಂಕ್ಗೆ ಎಚ್ಚರಿಕೆಯ ಕಿವಿಮಾತೂ ಹೇಳಿದ್ದಾರೆ.
ಅಗರ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸ ಪರಿಚಯವಾಗಿದ್ದು ಟೆಸ್ಟ್ ಕ್ರಿಕೆಟನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರು ಈ ಆಟದ ವೈಖರಿಯನ್ನು ಮುಂದಿನ ಆವೃತ್ತಿಯಲ್ಲೂ ಮುಂದುವರಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಅತ್ಯುನ್ನತ ಫಾರ್ಮ್ನಲ್ಲಿರುವ ಅಗರ್ವಾಲ್ ಬಗ್ಗೆ ತಿಳಿದುಕೊಳ್ಳಲು ಎದುರಾಳಿಗಳು ಶುರುಮಾಡಿದ್ದಾರೆ. ಅವರ ವಿರುದ್ಧ ತಂತ್ರಗಾರಿಕೆಗಳನ್ನು ರೂಪಿಸಿ ರನ್ ಗಳಿಸದಂತೆ ಮಾಡಲು ಸಿದ್ದರಾಗಿರುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಅಗರ್ವಾಲ್ ಆಟ ನೋಡಲು ತುಂಬಾ ಖುಷಿಯಾಗುತ್ತಿದೆ. ಆಫ್ಸೈಡ್ನಲ್ಲಿ ಯಾವುದೇ ತಪ್ಪಿಲ್ಲದೆ ಅವರು ಸಲೀಸಾಗಿ ರನ್ ತೆಗೆಯುತ್ತಾರೆ. ಮಯಾಂಕ್ ಪಾದಚಲನೆಯ ಕೌಶಲ್ಯ ಅವರಿಗೆ ಅತ್ಯುನ್ನತ ಫಾರ್ಮ್ ತಂದುಕೊಟ್ಟಿದೆ. ಅವರು ಇದೇ ಪ್ರದರ್ಶನವನ್ನು ಕಾಯ್ದುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.
ಮಯಾಂಕ್ ಕೇವಲ 8 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 76 ಹಾಗೂ 42 ರನ್ ಗಳಿಸಿದ್ದರು. ನಂತರದ ಪಂದ್ಯದಲ್ಲಿ 77 ರನ್ ಕಲೆ ಹಾಕಿದ್ದಾರೆ. ವಿಂಡೀಸ್ ಸರಣಿಯಲ್ಲಿ ವಿಫಲವಾದರೂ ಹರಿಣಗಳ ವಿರುದ್ಧ 215 ಹಾಗೂ 108 ರನ್ಗಳಿಸಿ ಹಾಗೂ ಬಾಂಗ್ಲಾದೇಶದ ವಿರುದ್ಧ 243 ರನ್ ಸಾಧನೆ ಮಾಡಿದ್ದಾರೆ.
ಅಗರ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 740 ರನ್ ಗಳಿಸುವ ಮೂಲಕ ಹೆಚ್ಚು ರನ್ ಗಳಿಸಿದವರಲ್ಲಿ ಸ್ಮಿತ್(771) ನಂತರದ ಸ್ಥಾನ ಪಡೆದಿದ್ದಾರೆ.