ಮುಂಬೈ: ಮುಂಬರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತು ಅವರ ತಂಡ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಸವಾಲನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಭಾರತದ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಎಚ್ಚರಿಕೆ ನೀಡಿದ್ದಾರೆ.
ಭಾರತ ತಂಡದ ಶಾರ್ಟ್ ಪಿಚ್ ಯೋಜನೆ ನನ್ನ ವಿರುದ್ಧ ನಡೆಯುವುದಿಲ್ಲ. ಒಂದು ವೇಳೆ ನನ್ನನ್ನು ಶಾಟ್ ಬಾಲ್ ಪ್ರಯೋಗಿಸಿ ಔಟ್ ಮಾಡಬಹುದೆಂದು ಟೀಮ್ ಇಂಡಿಯಾ ಬೌಲರ್ಸ್ ಭಾವಿಸಿದರೆ ಅದರಿಂದ ಆಸ್ಟ್ರೇಲಿಯಾ ತಂಡಕ್ಕೆ ಲಾಭವಾಗಲಿದೆ ಎಂದು ಆಸ್ಟ್ರೇಲಿಯಾದ ಅಗ್ರ ಬ್ಯಾಟ್ಸ್ಮನ್ ಸ್ಮಿತ್ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್, ಮೊಹಮ್ಮದ್ ಶಮಿ ಅವರ ವಿನಾಶಕಾರಿ ಬೌಲಿಂಗ್ ತಂತ್ರದ ವಿರುದ್ಧ ಆಡುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ.
ಭಾರತೀಯ ಬೌಲಿಂಗ್ ಘಟಕದಲ್ಲಿ ವ್ರೆಕರ್ ಇನ್ ಚೀಫ್ ಎಂದು ಕರೆಯಲ್ಪಡುವ ಶಮಿ ತನ್ನ ಮಾರಕ ಬೌನ್ಸರ್ಗಳೊಂದಿಗೆ ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ಗಳ ಸವಾಲನ್ನು ಸುಲಭವಾಗಿ ಎದುರಿಸಲಿದ್ದಾರೆ. ಹೀಗಾಗಿ, ಮುಂಬರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚಿನ ಹಾನಿ ಮಾಡಬಲ್ಲ ಬೌಲರ್ ಶಮಿ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸ್ಮಿತ್ ಅವರ ಬೌನ್ಸರ್ ಚಾಲೆಂಜ್ ಬಗ್ಗೆ ಮಾತನಾಡಿರುವ ಅವರು, ಯಾವುದೇ ಬ್ಯಾಟ್ಸ್ಮನ್ ಶಾರ್ಟ್ ಬಾಲ್ ಎದುರಿಸಲು ಸಿದ್ದರಿರುವುದಿಲ್ಲ ಎಂದಿದ್ದಾರೆ.
"ಶಾರ್ಟ್ ಬಾಲ್ಗೆ ಯಾರೊಬ್ಬರು ಸಿದ್ದರಿರುವುದಿಲ್ಲ, ಒಂದು ಉತ್ತಮ ಶಾರ್ಟ್ ಬಾಲ್ ಅತ್ಯುತ್ತಮ ಬ್ಯಾಟ್ಸ್ಮನ್ಗಳಿಗೂ ಸಮಸ್ಯೆ ತಂದೊಡ್ಡುತ್ತದೆ. ಶಾರ್ಟ್ ಬಾಲ್ ಎದುರಿಸಲು ನಾನು ಸಿದ್ದ ಎಂದು ಯಾರು ಹೇಳಲಾರರು. ಮೊಹಮ್ಮದ್ ಶಮಿ ನಿರ್ದಿಷ್ಟವಾಗಿ ಅಸಾಧಾರಣ ಬೌನ್ಸರ್ ಹೊಂದಿದ್ದಾರೆ. ಅದನ್ನು ಸರಿಯಾಗಿ ಗುರಿಯತ್ತ ಎಸೆದರೆ, ಹೆಚ್ಚಿನ ಬ್ಯಾಟ್ಸ್ಮನ್ಗಳು ಅವರ ಸವಾಲನ್ನು ಎದುರಿಸುವುದು ಅಸಾಧ್ಯ ಎಂದು ಖಚಿತವಾಗಿ ಹೇಳಬಹುದು ಎಂದು" ಗವಾಸ್ಕರ್ ಸ್ಪೋರ್ಟ್ಸ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶಮಿ ಹೆಚ್ಚು ಉದ್ದವಿಲ್ಲದಿದ್ದರಿಂದ ಅವರು ಶಾರ್ಟ್ ಬಾಲ್ಗಳು ನಿಮ್ಮ ಭುಜ ಮತ್ತು ತಲೆಯ ಬಳಿ ಬರುತ್ತವೆ, ಅದು ಆಡುವುದಕ್ಕೆ ಅತ್ಯಂತ ಕಠಿಣವಾದ ಎಸೆತವಾಗಿರುತ್ತದೆ. ಅವರ ಲಯ ಉತ್ತಮವಾಗಿದ್ದರೆ ಅವರ ವಿರುದ್ಧ ಆಡುವುದು ಅಷ್ಟು ಸುಲಭದ ಮಾತಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
2018-19ರ ಪ್ರವಾಸದಲ್ಲಿ ಭಾರತ ತಂಡ ಆಸೀಸ್ ವಿರುದ್ಧ 2-1ರಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿತ್ತು. ಆ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ 20 ವಿಕೆಟ್ ಪಡೆದ್ರೆ, ಸಮಿ 16 ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಕಂಟಕಪ್ರಾಯರಾಗಿದ್ದರು.