ನವದೆಹಲಿ: ಸದಾ ಕೊಹ್ಲಿ ನಾಯಕತ್ವವನ್ನು ತೆಗಳುತ್ತಾ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಟೀಮ್ ಇಂಡಿಯಾ ಮಾಜಿ ಓಪನರ್ ಗೌತಮ್ ಗಂಭೀರ್ , ಇಂದು ಕೊಹ್ಲಿ ವೇಗವಾಗಿ 12 ಸಾವಿರ ರನ್ಗಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದ ವೇಳೆ, 63 ರನ್ಗಳಿಸಿದ್ದ ಕೊಹ್ಲಿ ಅದೇ ಪಂದ್ಯದಲ್ಲಿ ವೇಗವಾಗಿ 12 ಸಾವಿರ ರನ್ ಗಳಿಸಿದ ವಿಶ್ವದಾಖಲೆಗೆ ಪಾತ್ರರಾದರು. ಅವರು 242 ಇನ್ನಿಂಗ್ಸ್ಗಳಲ್ಲಿ 12 ಸಾವಿರ ರನ್ ಪೂರೈಸುವ ಮೂಲಕ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್(300) ದಾಖಲೆಯನ್ನು ಮುರಿದಿದ್ದರು. ಅಲ್ಲದೇ ಸಂಗಾಕ್ಕರ, ರಿಕಿ ಪಾಂಟಿಂಗ್, ಜಯಸೂರ್ಯ, ಜಯವರ್ದನೆ ನಂತರ 12 ಸಾವಿರಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಸದಾ ತಮ್ಮ ಅನಿಯಮಿತ ಅಭಿಪ್ರಾಯ ಮತ್ತು ಟೀಕೆಗಳಿಗೆ ಹೆಸರು ವಾಸಿಯಾಗಿರುವ ಅವರು ಕೊಹ್ಲಿ ಈ ಮೈಲಿಗಲ್ಲು ತಲುಪಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರಿಕೆಟ್ನಲ್ಲಿ ನೀವು ಏನೂ ಬೇಕಾದರೂ ಪಡೆದು ಕೊಳ್ಳಬಹುದು, ನೀವು ನಿಮಗೆ ಅನ್ನಿಸಿದ್ದನ್ನು ಮಾಡಬಹುದು, ಆದರೆ ವಿಶ್ವದಲ್ಲಿಯೇ ಅತ್ಯುತ್ತಮ ಭಾವನೆ ಎಂದರೆ, ನೀವು ಕೊನೆಯ ರನ್ ಪೂರ್ಣಗೊಳಿಸಿ ಹೋಟೆಲ್ ರೂಮ್ಗೆ ಹಿಂತಿರುಗಿದಾಗ ದೇಶಕ್ಕಾಗಿ ನೀವು ಮಾಡಿರುವ ಸಾಧನೆ ನಿಮಗೆ ತೃಪ್ತಿ ತಂದಿರುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ಮಾತು ಮುಂದುವರಿಸಿ, " ಆದ್ದರಿಂದ ಬಹುಶಃ ಆ ಎಲ್ಲ ಸಂಯೋಜನೆಗಳು ಅವನ(ಕೊಹ್ಲಿ) ಈ ಸಾಧನೆಗೆ ಕಾರಣವಾಗಿದೆ. ಅವರಿಗೆ ಹ್ಯಾಟ್ಸ್ ಅಪ್, ಅವರು ಈಗಾಗಲೆ 20 ಸಾವಿರಕ್ಕೂ ಹೆಚ್ಚು ರನ್, 70 ಶತಕ ಗಳಿಸಿದ್ದಾರೆ" ಎಂದು ಗಂಭೀರ್ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದಾರೆ.
ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ಪ್ಲೇ ಆಫ್ನಲ್ಲಿ ಹಿಂತಿರುಗಿದಾಗ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಸಬೇಕೆಂದು ಹೇಳಿಕೆ ನೀಡಿದ್ದ ಗಂಭೀರ್ ನಂತರ ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸೋಲುಕಂಡಿದ್ದಕ್ಕೆ ಕೊಹ್ಲಿ ನಾಯಕತ್ವವನ್ನು ಟೀಕಿಸಿದ್ದರು.