ಹೈದರಾಬಾದ್ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಳೆದುಕೊಂಡ ನಂತರ ಪುಟದೆದ್ದ ಕೊಹ್ಲಿ ಪಡೆ ಟಿ-20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಏಕದಿನ ಹಾಗೂ ಟಿ-20 ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎರಡನೇ ಟಿ-20 ಪಂದ್ಯದ ಬಳಿಕ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, ಹಾರ್ದಿಕ್ ಪಾಂಡ್ಯ ಆಟಕ್ಕೆ ಫಿದಾ ಆಗಿದ್ದರು. ಅಲ್ಲದೇ ಪಾಂಡ್ಯರನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಹೋಲಿಕೆ ಮಾಡಿದ್ದರು.
ಪಾಂಡ್ಯ ಬ್ಯಾಟಿಂಗ್ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗಂಭೀರ್, ಎಷ್ಟೇ ದೊಡ್ಡ ಮೊತ್ತದ ಗುರಿ ಬೆನ್ನತ್ತುವ ಸಾಮರ್ಥ್ಯ ಹೊಂದಿದ್ದ ಯುವರಾಜ್ ಸಿಂಗ್ ಹಾಗೂ ಧೋನಿ ಅವರ ಸಾಲಿಗೆ ಹಾರ್ದಿಕ್ ಪಾಂಡ್ಯ ಸೇರಿಕೊಳ್ಳುತ್ತಾರೆ ಎಂದಿದ್ದಾರೆ.
ಓದಿ: ಇಂದು 3ನೇ ಟಿ-20 ಪಂದ್ಯ: ಕ್ಲೀನ್ ಸ್ವಿಪ್ನತ್ತ ಭಾರತದ ಚಿತ್ತ, ಆಸೀಸ್ಗೆ ವೈಟ್ವಾಶ್ ಭೀತಿ
"ಯುವರಾಜ್ ಸಿಂಗ್ ಹಾಗೂ ಧೋನಿ ರೀತಿ ಹಾರ್ದಿಕ್ ಪಾಂಡ್ಯ ಅವರಂಥ ಕೆಲ ಆಟಗಾರರು ಮಾತ್ರ ದೊಡ್ಡ ಮೊತ್ತವನ್ನು ಚೇಸ್ ಮಾಡಲು ಸಮರ್ಥರಾಗಿರುತ್ತಾರೆ. ಆಸ್ಟ್ರೇಲಿಯಾ ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ವರ್ಗಕ್ಕೆ ಸೇರಿಕೊಳ್ಳುತ್ತಾರೆ. ಕೊನೆಯ ಓವರ್‌ನಲ್ಲಿ 20 ರಿಂದ 25 ರನ್‌ಗಳಿದ್ದರೂ ಈ ಆಟಗಾರರು ಚೇಸ್ ಮಾಡಬಲ್ಲರು ಎಂಬ ನಂಬಿಕೆ ಇರುತ್ತದೆ" ಎಂದು ಅವರು ಹೇಳಿದ್ದಾರೆ.
"ಪಾಂಡ್ಯ ಈ ತರಹದ ಆಟವನ್ನು ಐಪಿಎಲ್ನಲ್ಲಿಯೇ ಪ್ರದರ್ಶಿಸಿದ್ದಾರೆ. ಐಪಿಎಲ್ ಟೂರ್ನಿಯ ಉತ್ತಮ ಇನ್ನಿಂಗ್ಸ್‌ಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ಅವರು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ, ಭಾನುವಾರದ ಪಂದ್ಯದಲ್ಲಿ ಅವರು ಅಬ್ಬರಿಸಿದ್ದು ನನಗೆ ಹೊಸದಾಗೇನೂ ಕಾಣಲಿಲ್ಲ" ಎಂದು ಗಂಭೀರ್ ಹೇಳಿದ್ದಾರೆ.