ಮುಂಬೈ : ಭಾರತ ತಂಡ ಪ್ರಸ್ತುತ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದಾಗಿದೆ. ಆದರೆ, ಪಂದ್ಯದ ಗೆಲುವಿನಲ್ಲಿ ಕೆಲವೇ ಆಟಗಾರರನ್ನು ಹೆಚ್ಚು ನಂಬಿಕೊಳ್ಳುವುದರಿಂದ ಐಸಿಸಿ ಟೂರ್ನಿಗಳಲ್ಲಿ ಗೆಲ್ಲಲೂ ವಿಫಲವಾಗುತ್ತಿದೆ. ಹಾಗಾಗಿ ಟೀಮ್ ಇಂಡಿಯಾಗೆ ರೋಹಿತ್, ಕೊಹ್ಲಿಯಂತಹ ಮ್ಯಾಚ್ ವಿನ್ನರ್ಗಳ ಅಗತ್ಯ ಖಂಡಿತಾ ಇದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಕೊನೆಯ ಬಾರಿ 2013ರಲ್ಲಿ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆ ಕೊನೆಯ ಐಸಿಸಿ ಟ್ರೋಫಿಯಾಗಿದೆ. ನಂತರ 2015,2019ರ ಏಕದಿನ ವಿಶ್ವಕನ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡರೆ, 2012ರ ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಮತ್ತು 2016ರಲ್ಲಿ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಾಗೂ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಆಗಿದೆ.
2019ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಟಾಪ್ ರ್ಯಾಂಕ್ ತಂಡವಾಗಿ ಕಣಕ್ಕಿಳಿದು ಗುಂಪು ಹಂತದಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ, ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 240 ರನ್ಗಳನ್ನು ಚೇಸ್ ಮಾಡಲಾಗದೆ ಸೋಲು ಕಂಡಿತ್ತು. ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕಾದರೆ ಕೊಹ್ಲಿ-ರೋಹಿತ್‌ರಂತಹ ಮ್ಯಾಚ್ ವಿನ್ನರ್ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಭಾರತ ತಂಡದ 2-3 ಆಟಗಾರರ ಹಿಂದೆ ಹೋಗುವುದನ್ನು ನಿಲ್ಲಿಸಬೇಕು, ಕಳೆದ ವಿಶ್ವಕಪ್ನಲ್ಲಿ ರೋಹಿತ್ ಕೀ ಪ್ಲೇಯರ್ ಆದರೆ, ಕೊಹ್ಲಿ ಸದಾ ಟೀಮ್ ಇಂಡಿಯಾಗೆ ಪ್ರಮುಖ ಆಟಗಾರರಾಗಿರುತ್ತಾರೆ. ಆದರೆ, ನಿಮ್ಮ ತಂಡದಲ್ಲಿ ಹೆಚ್ಚು ಮ್ಯಾಚ್ ವಿನ್ನರ್ಗಳನ್ನು ಹೊಂದಿರಬೇಕು.
ಖಂಡಿತ ವಿಶ್ವಕಪ್ ಗೆಲ್ಲಲು ಭಾರತ ತಂಡಕ್ಕೆ ರೋಹಿತ್-ಕೊಹ್ಲಿ ಜೊತೆಗೆ ಮತ್ತಷ್ಟು ಮ್ಯಾಚ್ ವಿನ್ನರ್ಗಳು ಬೇಕಾಗಿದ್ದಾರೆ. ಅವರಿಬ್ಬರು ಒತ್ತಡದ ಪಂದ್ಯಗಳಲ್ಲಿ ಬೇಗ ಔಟಾದರೆ, ಅವರ ಜವಾಬ್ದಾರಿಯನ್ನು ವಹಿಸಿಕೊಂಡು ಟೀಮ್ ಇಂಡಿಯಾಕ್ಕಾಗಿ ಕೆಲಸ ಮಾಡುವ ನಂಬಿಕೆಯನ್ನ ಅವರು ಹೊಂದಿರಬೇಕು" ಎಂದು ಭಜ್ಜಿ ಹೇಳಿದ್ದಾರೆ.
ಪ್ರಸ್ತುತ ಕೆಎಲ್ ರಾಹುಲ್ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಂದುವರಿಯುತ್ತಾ ಭಾರತ ತಂಡಕ್ಕೆ ಕೀ ಪ್ಲೇಯರ್ ಆಗಿದ್ದಾರೆ. ನಮಗೆ ಕೊಹ್ಲಿ-ರೋಹಿತ್ ಸುತ್ತ ರಾಹುಲ್ ಅಂತಹ ಆಟಗಾರರ ಅಗತ್ಯವಿದೆ. ಯಾರೇ ಔಟಾದರೂ ತಂಡವನ್ನು ಗೆಲ್ಲಿಸುವ ಮನೋಬಲವುಳ್ಳ ಆಟಗಾರರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
2011ರಲ್ಲಿ ಭಾರತ ತಂಡ ಸಚಿನ್ ತೆಂಡೂಲ್ಕರ್ ಮತ್ತು ಸೆಹ್ವಾಗ್ ಔಟಾದರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಹೊಂದಿದ್ದೆವು. ಡ್ರೆಸ್ಸಿಂಗ್ ರೂಮ್ನಲ್ಲಿ ಗಂಭೀರ್, ಧೋನಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿತ್ತು. ಅಥವಾ ಯುವರಾಜ್ ಸಿಂಗ್ ಆ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿತ್ತು. ಅವರಿಂದ ಆಗದಿದ್ದರೆ ನಾನು ಆ ಕೆಲಸ ಮಾಡುತ್ತೇನೆಂಬ ನಂಬಿಕೆ ಇತ್ತು. ಎಲ್ಲಾ ಆಟಗಾರರಲ್ಲಿ ಆ ನಂಬಿಕೆ ಒಳಗಿನಿಂದ ಬರಬೇಕು ಎಂದು ಹರ್ಭಜನ್ ಹೇಳಿದ್ದಾರೆ.