ಮುಂಬೈ : ಪ್ರಸ್ತುತ ವಿಶ್ವಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್ಮನ್, ರನ್ ಮಷಿನ್ ಎಂದೇ ಕರೆಸಿಕೊಳ್ಳುವ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಪುಡಿ ಮಾಡಿ ಮುನ್ನುಗ್ಗುತ್ತಿದ್ದಾರೆ.
ಅದು ಟಿ20, ಏಕದಿನ ಅಥವಾ ಟೆಸ್ಟ್ ಕ್ರಿಕೆಟ್ನಲ್ಲೂ ಭಾರತ ತಂಡದ ನಾಯಕ ಕೊಹ್ಲಿ ಇಂದು ಶ್ರೇಷ್ಠ ಬ್ಯಾಟ್ಸ್ಮನ್ ಎಂಬುದರಲ್ಲಿ ಎರಡು ಮಾತು ಇಲ್ಲ. ಆದರೆ, 2008ರಲ್ಲೇ ಅವರು ಭವಿಷ್ಯದಲ್ಲಿ ಸ್ಟಾರ್ ಕ್ರಿಕೆಟ್ ಆಗಲಿದ್ದಾರೆ ಎಂದು ಸಾಬೀತಾಗಿತ್ತು ಎಂದು ಭಾರತ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
ವೈಯಕ್ತಿಕ ಕಾರಣದಿಂದ ಐಪಿಎಲ್ನಿಂದ ಹೊರ ಬಂದಿರುವ ಹರ್ಭಜನ್ ಸಿಂಗ್, ಸ್ಟಾರ್ಸ್ ಸ್ಪೋರ್ಟ್ಸ್‌ನ ಐಪಿಎಲ್ ಮೆಮೋರಿ ಶೋನಲ್ಲಿ ಭಾಗವಹಿಸಿದ್ದರು. ವಿರಾಟ್ ಕೊಹ್ಲಿ 2008ರಲ್ಲಿ ದಿಗ್ಗಜ ಸನತ್ ಜಯಸೂರ್ಯ ಅವರ ಬೌಲಿಂಗ್ನಲ್ಲಿ ಮುಂದೆ ನುಗ್ಗಿ ಸಿಕ್ಸರ್ ಸಿಡಿಸಿದ್ದ ಘಟನೆಯನ್ನು ಶೋನಲ್ಲಿ ಸ್ಮರಿಸಿಕೊಂಡಿದ್ದಾರೆ.
ಅಂದು ಸಚಿನ್ ಪಂದ್ಯದಿಂದ ಹೊರಗುಳಿದಿದ್ದರಿಂದ ಮುಂಬೈ ಇಂಡಿಯನ್ಸ್ ತಂಡವನ್ನು ನಾನೇ ಮುನ್ನಡೆಸಿದ್ದೆ. ಸನತ್ ಜಯಸೂರ್ಯ ಬೌಲಿಂಗ್ನಲ್ಲಿ ವಿರಾಟ್ ಮುನ್ನುಗ್ಗಿ ಸಿಕ್ಸರ್ ಸಿಡಿಸಿದ್ದರು. ಆತನ ಕಣ್ಣಲ್ಲಿ ಜಯಸೂರ್ಯ ಅವರ ಬೌಲಿಂಗ್ನಲ್ಲಿ ಆಡುತ್ತಿದ್ದೇನೆ ಎಂಬ ಭಯವಿರಲಿಲ್ಲ. ಅದು ಆತ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಗುತ್ತಾನೆಂದು ಸಾಬೀತು ಪಡಿಸಿತ್ತು ಎಂದು 12 ವರ್ಷಗಳ ಹಿಂದಿನ ಘಟನೆ ನೆನಪಿಸಿ ಕೊಹ್ಲಿಯನ್ನು ಹೊಗಳಿದ್ದಾರೆ.
2008ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದಾಗಿನಿಂದಲೂ ವಿರಾಟ್ ಕೊಹ್ಲಿ ಆರ್ಸಿಬಿ ಪರವೇ ಆಡುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಕ್ರಿಕೆಟಿಗರಾಗಿರುವ ವಿರಾಟ್ ಕೊಹ್ಲಿ, 177 ಪಂದ್ಯಗಳಲ್ಲಿ 5 ಶತಕ ಸಹಿತ 5412 ರನ್ಗಳಿಸಿದ್ದಾರೆ.