ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಕ್ರವಾರ 13ನೇ ಆವೃತ್ತಿಯ ಐಪಿಎಲ್ಗಾಗಿ ಯುಎಇಗೆ ತೆರಳುತ್ತಿದ್ದು, ಈ ವೇಳೆ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮಾತ್ರ ಸಿಎಸ್ಕೆ ತಂಡದ ಜೊತೆ ತೆರಳುತ್ತಿಲ್ಲ ಎಂದು ತಿಳಿದು ಬಂದಿದೆ.
2020ರ ಐಪಿಎಲ್‌ಗೆ ಸರಿಯಾಗಿ ಇನ್ನು ಒಂದು ತಿಂಗಳಿದೆ. ಇಂದು ಹಾಗೂ ನಾಳೆ ಕೆಲವು ಪ್ರಾಂಚೈಸಿಗಳು ಯುಎಇಗೆ ಹಾರಲಿದೆ. ಅಲ್ಲಿ ಕ್ವಾರಂಟೈನ್ ಮುಗಿಸಿ ಬಯೋ ಸೆಕ್ಯೂರ್ ವಲಯದಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿವೆ.
ಆಗಸ್ಟ್ 21ರಂದು ಯುಎಇಗೆ ತೆರಳಲು ಚೆನ್ನೈ ಸೂಪರ್ ಕಿಂಗ್ಸ್ ನಿರ್ಧರಿಸಿದೆ. ಆದರೆ, ಹರ್ಭಜನ್ ಸಿಂಗ್ ಕೆಲವು ವೈಯಕ್ತಿಕ ಕಾರಣಗಳಿಂದ ದುಬೈಗೆ ತೆರಳುತ್ತಿಲ್ಲ . ಈಗಾಗಲೇ ಈ ಕುರಿತು ಪ್ರಾಂಚೈಸಿ ಜೊತೆಗೆ ಮಾತನಾಡಿದ್ದು, ಭಜ್ಜಿ ಮನವಿಯನ್ನು ಫ್ರಾಂಚೈಸಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.
ಹರ್ಭಜನ್ ಸಿಂಗ್ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂದರ್ಭದಲ್ಲಿ ತಮ್ಮ ತಾಯಿ ಜೊತೆ ಕೆಲವು ಸಮಯ ಇರುವುದಾಗಿ ಭಜ್ಜಿ ಬಯಸಿದ್ದಾರೆ. ಹಾಗಾಗಿ ಅನುಭವಿ ಸ್ಪಿನ್ನರ್ ತಡವಾಗಿ ದುಬೈಗೆ ತೆರಳುವುದಾಗಿ ಅವರು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಕಳೆದ 5 ದಿನಗಳ ಕಾಲ ಸಿಎಸ್ಕೆ ತಂಡ ಚೆನ್ನೈನಲ್ಲಿ ನಡೆಸಿದ್ದ ತರಬೇತಿ ಶಿಬಿರಕ್ಕೂ ಅವರು ಗೈರಾಗಿದ್ದರು. ಭಜ್ಜಿ ಜೊತೆಗೆ ರವೀಂದ್ರ ಜಡೇಜಾ, ಹಾಗೂ ವೇಗಿ ಶಾರ್ದೂಲ್ ಠಾಕೂರ್ ಕೂಡ ಕೆಲವು ಕಾರಣಗಳಿಂದ ಚೆನ್ನೈಗೆ ತೆರಳಿರಲಿಲ್ಲ. ಆದರೆ, ಶಾರ್ದೂಲ್ ಠಾಕೂರ್ ಬುಧವಾರ ಚೆನ್ನೈಗೆ ಬಂದಿಳಿದಿದ್ದಾರೆ. ಇಂದು ಜಡೇಜಾ ಕೂಡ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.