ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಇಂಡಿಯನ್ ಪ್ರಿಮಿಯರ್ ಲೀಗ್ ನಡೆಸಲು ಕೇಂದ್ರ ಸರ್ಕಾರ ಬಿಸಿಸಿಐಗೆ ಔಪಚಾರಿಕ ಅನುಮೋದನೆ ನೀಡಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬಹಿರಂಗಪಡಿಸಿದ್ದಾರೆ.
ಆಗಸ್ಟ್ 18 ರೊಳಗೆ ಬಿಸಿಸಿಐ ಪಂದ್ಯಾವಳಿಯ ನೂತನ ಟೈಟಲ್ ಪ್ರಾಯೋಜಕರನ್ನು ಪ್ರಕಟಿಸಲಿದೆ. ಆಸಕ್ತ ಕಂಪನಿಗಳಿಗೆ ಬಿಡ್ ಸಲ್ಲಿಸಲು ಏಳು ದಿನಗಳ ಕಾಲ ಅವಕಾಶ ಇರುತ್ತದೆ ಎಂದು ಐಪಿಎಲ್ ಮುಖ್ಯಸ್ಥರು ಹೇಳಿದ್ದಾರೆ.
ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10 ರವರೆಗೆ ಶಾರ್ಜಾ, ಅಬುಧಾಬಿ ಮತ್ತು ದುಬೈನ ಮೂರು ನಗರಗಳಲ್ಲಿ ನಡೆಯಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ಮಾರ್ಕ್ಯೂ ಲೀಗ್ ಅನ್ನು ಯುಎಇಗೆ ಸ್ಥಳಾಂತರಿಸಲು ಸರ್ಕಾರ ಕಳೆದ ವಾರ ಬಿಸಿಸಿಐಗೆ ತಾತ್ವಿಕ ಒಪ್ಪಿಗೆ ನೀಡಿತ್ತು.
ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ಮತ್ತು ವಿದೇಶಾಂಗ ಸಚಿವಾಲಯ (ಎಂಇಎ) ಎರಡರಿಂದಲೂ ಲಿಖಿತವಾಗಿ ಅನುಮತಿ ಬಂದಿದೆಯೇ ಎಂದು ಪಿಟಿಐ ಕೇಳಿದಾಗ, 'ಹೌದು, ನಾವು ಎಲ್ಲಾ ಲಿಖಿತ ಅನುಮೋದನೆಗಳನ್ನು ಸ್ವೀಕರಿಸಿದ್ದೇವೆ' ಎಂದಿದ್ದಾರೆ.
ಭಾರತೀಯ ಕ್ರೀಡಾ ಸಂಸ್ಥೆಯು ದೇಶಿಯ ಪಂದ್ಯಾವಳಿಯನ್ನು ವಿದೇಶಕ್ಕೆ ಸ್ಥಳಾಂತರಿಸಿದಾಗ, ಅದಕ್ಕೆ ಗೃಹ, ಬಾಹ್ಯ ಮತ್ತು ಕ್ರೀಡಾ ಸಚಿವಾಲಯಗಳಿಂದ ಅನುಮತಿ ಬೇಕಾಗುತ್ತದೆ.