ನವದೆಹಲಿ: ಐಪಿಎಲ್ನ ಶ್ರೇಷ್ಠ ಸ್ಪಿನ್ ಬೌಲರ್ಗಳಲ್ಲಿ ಒಬ್ಬರಾಗಿರುವ ರಶೀದ್ ಖಾನ್, ಇದೀಗ ಬೇರೊಂದು ಆಸಕ್ತಿದಾಯಕ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ.
ಅದೇನೆಂದರೆ, ಗೂಗಲ್ನಲ್ಲಿ ರಶೀದ್ ಖಾನ್ ಪತ್ನಿ (Rashid Khan wife) ಎಂದು ಸರ್ಚ್ ಮಾಡಿದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಹೆಸರನ್ನು ಸೂಚಿಸುತ್ತಿದೆ. ಅಲ್ಲದೇ ಇವರ ಮದುವೆ ದಿನಾಂಕವನ್ನು ಕೊಹ್ಲಿ ಹಾಗೂ ಅನುಷ್ಕಾ ವಿವಾಹವಾಗಿರುವ ದಿನಾಂಕವನ್ನೇ ರಶೀದ್ ಕಿರು ಪರಿಚಯದಲ್ಲಿ ತೋರಿಸುತ್ತಿದೆ. ಸಾಮಾಜಿಕ ಜಾಲಾತಾಣದಲ್ಲಿ ಇದರ ಸ್ಕ್ರೀನ್ಶಾಟ್ ವೈರಲ್ ಆಗುತ್ತಿವೆ.
ಆದರೆ, ಗೂಗಲ್ ಈ ರೀತಿ ತಪ್ಪಾಗಿ ತೋರಿಸುತ್ತಿರುವುದಕ್ಕೆ ಕಾರಣ ಕೂಡ ಬಹಿರಂಗವಾಗಿದೆ. ಏನೆಂದರೆ, 2018 ರಲ್ಲಿ ಇನ್ಸ್ಟಾಗ್ರಾಂ ಚಾಟ್‌ನಲ್ಲಿ ನಿಮ್ಮ ನೆಚ್ಚಿನ ಬಾಲಿವುಟ್ ತಾರೆಯರು ಯಾರೆಂದು ಅಭಿಮಾನಿಗಳು ರಶೀದ್ ಖಾನ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಶೀದ್ , ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಝಿಂಟಾ ಎಂದು ಹೇಳಿದ್ದರು. ರಶೀದ್ ಹೀಗೆ ಹೇಳಿದಾಗಿನಿಂದ ಅನುಷ್ಕಾ ಶರ್ಮಾ ರಶೀದ್ ಖಾನ್ರ ಪತ್ನಿ ಎಂದು ಗೂಗಲ್ ಸೂಚಿಸುತ್ತಿದೆ.
ಆದರೆ, ಆಶ್ಚರ್ಯವೆಂದರೆ ರಶೀದ್ ಖಾನ್ ಇನ್ನೂ ವಿವಾಹವಾಗಿಲ್ಲ. ರಶೀದ್ ಸಂದರ್ಶನವೊಂದರಲ್ಲಿ ಯಾವಾಗ ಎಂಗೇಜ್ ಆಗುತ್ತೀರಾ ಎಂದು ಕೇಳಿದ್ದಕ್ಕೆ , ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರ ಎಂಗೇಜ್, ಮದುವೆ ಎಂದು ಹೇಳಿಕೆ ನೀಡಿದ್ದರು.