ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಪದಾರ್ಪಣೆ ಮಾಡಿದ್ದಾರೆ. ಆದರೆ ಮಾಜಿ ವೇಗಿ ಅಜಿತ್ ಆಗರ್ಕರ್, ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಎರಡು ವರ್ಷಗಳ ಹಿಂದೆಯೇ ಅವಕಾಶ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಗಿಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೂ ಒತ್ತಡವನ್ನು ಮೆಟ್ಟಿ ನಿಂತು ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಪಂಜಾಬ್ ಯುವ ಬ್ಯಾಟ್ಸ್ಮನ್ 38 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
"ಅವರು (ಶುಬ್ಮನ್ ಗಿಲ್) ಒಂದೆರಡು ವರ್ಷಗಳ ಹಿಂದೆಯೇ ಅವಕಾಶ ಪಡೆದಿರಬೇಕಿತ್ತು. ಅವರು ಆಗಲೇ ಸಿದ್ಧರಿದ್ದರು. ಅವರು ಅಂತಹ ಸಾಮರ್ಥ್ಯ ಪಡೆದಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುವುವು" ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಈ ಸಣ್ಣ ಅವಧಿಯಲ್ಲಿ ಆಡುವುದು ಸುಲಭವಾಗುತ್ತಿರಲಿಲ್ಲ. ಆದರೆ ಗಿಲ್ ಆಡಿದ ಪ್ರತಿಯೊಂದು ಚೆಂಡಿನಲ್ಲೂ ಆತ್ಮವಿಶ್ವಾಸ ಕಾಣುತ್ತಿತ್ತು. ಹೌದು, ಇಂತಹ ಒಂದು ಅವಕಾಶ, ಕೆಲವು ಅದೃಷ್ಟವನ್ನು ಕೂಡ ಆತ ಪಡೆದಿದ್ದಾನೆ. ಆಶಾದಾಯಕವಾಗಿ, ಅವನು ಹೀಗೆಯೇ ಮುಂದುವರೆಯಬಹುದು ಮತ್ತು ಮತ್ತಷ್ಟು ರನ್ಗಳನ್ನು ಗಳಿಸಬಹುದು ಎಂದು ಅಗರ್ಕರ್ ಹೇಳಿದ್ದಾರೆ.
ಇಂದಿನ ಪಂದ್ಯದ 4ನೇ ಓವರ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಓವರ್ ಮತ್ತು ಸ್ಟಾರ್ಕ್ ಓವರ್ನಲ್ಲಿ ಒಂದೆರಡು ಬಾರಿ ಪೆಟ್ಟು ತಿಂದಿದ್ದರೂ ಜೊತೆಗೆ 5 ರನ್ ಗಳಿಸಿದ್ದ ವೇಳೆ 4ನೇ ಓವರ್ನಲ್ಲಿ ಜೀವದಾನ ಕೂಡ ಸಿಕ್ಕಿದೆ. ಇದರ ಸಂಪೂರ್ಣ ಲಾಭ ಪಡೆದ ಅವರು 5 ಆಕರ್ಷಕ ಬೌಂಡರಿ ಸಿಡಿಸಿ ಪೂಜಾರ ಜೊತೆಗೆ ಉತ್ತಮ ಜೊತೆಯಾಟ ನಡೆಸಿದ್ದಾರೆ.