ಕಿಂಗ್ಸ್ಟನ್: ಭಾರತದ ಶಶಾಂಕ್ ಮನೋಹರ್ ಅವರಿಂದ ತೆರವಾಗುತ್ತಿರುವ ’ಐಸಿಸಿ ಮುಖ್ಯಸ್ಥ ಸ್ಥಾನದ ಉತ್ತರಾಧಿಕಾರಿ ಹುದ್ದೆ ಪಡೆಯವು ರೇಸ್ಗೆ ಮಾಜಿ ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಮುಖ್ಯಸ್ಥ ಡೇವ್ ಕ್ಯಾಮರೂನ್ ಕೂಡ ಸೇರಿಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಕ್ರಿಕೆಟ್ ಹಾಲ್ ಆಫ್ ಫೇಮ್ ಇತ್ತೀಚೆಗೆ ಮನೋಹರ್‌ಗೆ ಪತ್ರ ಬರೆದಿದ್ದು, ಕ್ಯಾಮರೂನ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಉನ್ನತ ಹುದ್ದೆಗೆ ಶಿಫಾರಸು ಮಾಡಲು ಬಯಸುತ್ತದೆ ಎಂದು ತಿಳಿಸಿದೆ.
" ಅರ್ಹತೆಯ ಮೂಲಕ ತಂಡಗಳು ಗಳಿಸಬಹುದಾದ ಸುಸ್ಥಿರ ಆರ್ಥಿಕ ಮಾದರಿಯನ್ನು ನಾವು ಕಂಡುಹಿಡಿಯಬೇಕು ಎಂಬುದರಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ" ಎಂದು ಸಿಡಬ್ಲ್ಯುಐ ಅಧ್ಯಕ್ಷರಾಗಿ 2013 ರಿಂದ 2019 ರವರೆಗೆ ಸೇವೆ ಸಲ್ಲಿಸಿದ ಕ್ಯಾಮರೂನ್ ಹೇಳಿದ್ದಾರೆ.
ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ರಾಷ್ಟ್ರಗಳು ಎಲ್ಲಾ ಇವೆಂಟ್ಗಳು, ಪ್ರೇಕ್ಷಕರು ಹಾಗೂ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿವೆ. ಆದರೆ ಚಿಕ್ಕ ರಾಷ್ಟ್ರಗಳು ಹಣಕಾಸಿನ ಬೆಂಬಲಕ್ಕಾಗಿ ಐಸಿಸಿ ಕಡೆಗೆ ಎದುರು ನೋಡಬೇಕಿದೆ. ಹೀಗಾಗಿ ನಾವು ಆದಾಯದಲ್ಲಿ ಸಮಾನ ಪಾಲು ಅಲ್ಲ, ಸಮಾನ ಶೇರುಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಕ್ಯಾಮರಾನ್ ಹೇಳಿದ್ದಾರೆ.
ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕಣದಲ್ಲಿ ಉಳಿಯಬೇಕಾದರೆ ಎರಡು ನಾಮನಿರ್ಧೇಶನಗಳ ಅಗತ್ಯವಿದೆ. ಆದರೆ ಸಿಡಬ್ಲ್ಯೂಐ ಅಧ್ಯಕ್ಷ ರಿಕಿ ಸ್ಕೆರಿಟ್ ಬೆಂಬಲಿಸಿಲಿದ್ದಾರೆಯೆ ಎಂಬುದು ಇನ್ನೂ ಖಚಿತವಾಗಿಲ್ಲ.
ಭಾರತದ ಶಶಾಂಕ್ ಮನೋಹರ್ ಅವರ ಅಧಿಕಾರವಧಿ ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಜುಲೈನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಭೆಯಲ್ಲಿ ಹೊಸ ಅಧ್ಯಕ್ಷರು ಔಪಚಾರಿಕವಾಗಿ ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯಸ್ಥ ಕಾಲಿನ್ ಗ್ರೇವ್ ಪ್ರಸ್ತುತ ಉನ್ನತ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೆಸರೂ ಕೂಡ ಸದ್ದು ಮಾಡುತ್ತಿದೆ.