ಸೌತಾಂಪ್ಟನ್: ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಶನಿವಾರ ಟಿ-20 ಪಂದ್ಯವಾಡಿದ್ದನ್ನು ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಇದೊಂದು ವಿಚಿತ್ರವಾದ ಅನುಭವ ಎಂದಿದ್ದಾರೆ. ಆದರೂ ಇದೇ ಮೊದಲ ಬಾರಿಗೆ ತಾವೂ ಇಂಗ್ಲಿಷ್ ಅಭಿಮಾನಿಗಳಿಂದ ನಿಂದನೆಗೊಳಗಾಗಲಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ಕ್ರಿಕೆಟ್ಗೆ ಮರಳಿದ್ದ ವಾರ್ನರ್ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೆಲ್ಲಾ ಅಲ್ಲಿ ಪ್ರೇಕ್ಷಕರಿಂದ ಅಪಹಾಸ್ಯಕ್ಕೀಡಾಗುತ್ತಿದ್ದರು. ವಿಶ್ವಕಪ್ ಮತ್ತು ಆ್ಯಶಸ್ ಟೆಸ್ಟ್ ಸರಣಿಯ ವೇಳೆ ಕೂಡ ಅವರು ಹಲವಾರು ಬಾರಿ ನಿಂದನೆಗೊಳಗಾಗಿದ್ದರು.
ಆದರೆ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅಭಿಮಾನಿಗಳು ಇರಲಿಲ್ಲ. ಬಯೋ ಸೆಕ್ಯೂರ್ ವಲಯದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಅನುಮತಿ ನೀಡಿಲ್ಲ. ಆರು ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ್ದ ಆಸ್ಟ್ರೇಲಿಯಾ 2 ರನ್ಗಳಿಗೆ ವಿರೋಚಿತ ಸೋಲು ಕಂಡು ನಿರಾಶೆಯನುಭವಿಸಿತ್ತು. ಪಂದ್ಯದ ನಂತರ ಮಾತನಾಡಿದ ವಾರ್ನರ್ ಅಭಿಮಾನಿಗಳಿಲ್ಲದ್ದರಿಂದ ತಾವೂ ನಿಂದನೆಗೊಳಗಾಗುವುದು ತಪ್ಪಿತು ಎಂದಿದ್ದಾರೆ.
ನಾನು ಇಂಗ್ಲೆಂಡ್ಗೆ ಬಂದಾಗ ಇದೇ ಮೊದಲ ಬಾರಿಗೆ ನಿಂದನೆಗೊಳಪಟ್ಟಿಲ್ಲ. ಇದು ಉತ್ತಮವಾದ ಬೆಳವಣಿಗೆ ಎಂದು ಪಂದ್ಯದ ನಂತರ ವಾರ್ನರ್ ಹೇಳಿದ್ದಾರೆ.
ಇನ್ನು ಪ್ರೇಕ್ಷಕರಿಲ್ಲದೆ ನಡೆದ ಪಂದ್ಯವನ್ನು ವಿಚಿತ್ರ ಅನುಭವ ಎಂದಿರುವ ಅವರು, ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಈ ಸೋಲಿಗೆ ನೆಪ ಹೇಳದ ಅವರು ಇಂಗ್ಲೆಂಡ್ ಎಲ್ಲ ವಿಭಾಗದಲ್ಲಿ ಆಸ್ಟ್ರೇಲಿಯಾವನ್ನು ಮೀರಿಸಿತು ಎಂದು ಒಪ್ಪಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ಡೇವಿಡ್ ಮಲನ್(66) ಅರ್ಧಶತಕ ಹಾಗೂ ಬಟ್ಲರ್ರ 44 ರನ್ಗಳ ನೆರವಿನಿಂದ 162 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ರ 58 ಹಾಗೂ ಫಿಂಚ್ರ 46 ರನ್ಗಳ ಹೊರೆತಾಗಿಯೂ 160 ರನ್ಗಳಿಸಲಷ್ಟೇ ಶಕ್ತವಾಗಿ 2 ರನ್ಗಳ ವಿರೋಚಿತ ಸೋಲು ಕಂಡಿತು.