ಆಕ್ಲೆಂಡ್(ನ್ಯೂಜಿಲ್ಯಾಂಡ್): ಕಿವಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ರಾಮಕೃಷ್ಣನ್ ಶ್ರೀಧರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೆಲವು ಕ್ಯಾಚ್ಗಳನ್ನ ಕೈಚೆಲ್ಲಿದ್ದಲ್ಲದೆ, ರನ್ ಔಟ್ ಮಾಡುವ ಅವಕಾಶ ಕಳೆದುಕೊಂಡರು. ಈ ಬಗ್ಗೆ ಮಾತನಾಡಿರುವ ಶ್ರೀಧರನ್, ತವರಿನಲ್ಲಿ ವಿಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ನಮ್ಮ ಆಟಗಾರರ ಕ್ಷೇತ್ರ ರಕ್ಷಣೆ ಉತ್ತಮವಾಗಿರಲಿಲ್ಲ. ಅಲ್ಲಿಂದ ನಾವು ಫೀಲ್ಡಿಂಗ್ ವಿಭಾಗದಲ್ಲಿ ಹೆಚ್ಚು ಗಮನ ಹರಿಸುತ್ತಿದ್ದೇವೆ.
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ತಂಡದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು, ಆ ಗುಣಮಟ್ಟವನ್ನ ಕಾಯ್ದುಕೊಳ್ಳುವ ಯತ್ನದಲ್ಲಿದ್ದೇವೆ ಎಂದಿದ್ದಾರೆ.
ಕಿವಿಸ್ ನೆಲದಲ್ಲಿ ಎತ್ತರದಿಂದ ಬರುವ ಕ್ಯಾಚ್ಗಳನ್ನ ಪಡೆಯುವುದು ಸುಲಭವಲ್ಲ, ಹಾಗಂತ ಕೈಚೆಲ್ಲಲೂ ಸಾಧ್ಯವಿಲ್ಲ. ಕ್ಯಾಚ್ ಕೈಬಿಟ್ಟ ವಿಡಿಯೋಗಳನ್ನ ಆಟಗಾರರಿಗೆ ತೋರಿಸಿ ಎಲ್ಲಿ ತಪ್ಪು ಎಸಗಲಾಗಿದೆ ಎಂಬ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕಳೆದ ಪಂದ್ಯಲ್ಲಿ ಕೊಹ್ಲಿ ರನ್ಔಟ್ ಮಾಡಿದ ಕ್ಷಣ ಅದ್ಭುತವಾಗಿತ್ತು. ಉತ್ತಮ ಕ್ಷೇತ್ರ ರಕ್ಷಣೆ ನಿರ್ವಹಣೆ ಬಗ್ಗೆ ಪ್ರತಿಯೊಬ್ಬ ಅಟಗಾರರೂ ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದಿದ್ದಾರೆ.