ಪೋರ್ಟ್ ಅಫ್ ಸ್ಪೇನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೀರ್ಘ ಕಾಲದ ನಂತರ ಶತಕಗಳಿಸಿ ಸರಣಿಯಲ್ಲಿ 1-0 ಲೀಡ್ ಪಡೆಯಲು ನೆರವಾಗಿದ್ದರು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಬಹುಬೇಗನೆ ರೋಹಿತ್, ಧವನ್ ಹಾಗೂ ಪಂತ್ ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಗೊಳಗಾಗಿತ್ತು. ಆದರೆ, ಯುವ ಆಟಗಾರ ಅಯ್ಯರ್ ಜೊತೆಗೂ 125 ರನ್ಗಳ ಜೊತೆಯಾಟ ನಡೆಸಿದ ಕೊಹ್ಲಿ ಸ್ವತಃ 120 ರನ್ಗಳಿಸುವ ಮೂಲಕ 5 ತಿಂಗಳ ನಂತರ ಶತಕ ಬಾರಿಸಿದ್ದರು.
ವಿಶ್ವಕಪ್ ಸೇರಿದಂತೆ ಹಲವು ಟೂರ್ನಿಗಳನ್ನಾಡಿದ್ದ ಕೊಹ್ಲಿ ಅರ್ಧಶತಕ ಬಾರಿಸಿದ್ರೂ ಶತಕದಂಚಿಗೆ ಬಂದು ಎಡವುತ್ತಿದ್ದರು. ಆದರೆ, ನಿನ್ನೆ ಆ ತಪ್ಪನ್ನು ಮರುಕಳಿಸದಂತೆ ಎಚ್ಚರವಹಿಸಿ ಶತಕ ಪೂರೈಸಿದರು.
ಈ ಕುರಿತು ಮಾತನಾಡಿದ ಕೊಹ್ಲಿ" 5 ತಿಂಗಳ ನಂತರ ಶತಕ ಬಾರಿಸಿದೆ ಎನ್ನುವ ಖುಷಿಗಿಂತ ತಂಡಕ್ಕೆ ರನ್ಗಳು ಅವಶ್ಯಕತೆಯಿದ್ದಾಗ ಹಿರಿಯ ಆಟಗಾರನಾಗಿ ಜವಾಬ್ದಾರಿವಹಿಸಿ ತಂಡಕ್ಕೆ ಅಗತ್ಯವಾದ ಶತಕ ಬಾರಿಸಿದ್ದೇನೆ ಎಂಬುದೇ ನನಗೆ ಹೆಚ್ಚು ಖುಷಿ ನೀಡುತ್ತಿದೆ. ಅದರಲ್ಲೂ ಅನುಭವಿಗಳಾದ ಧವನ್, ರೋಹಿತ್ ಔಟಾದ ನಂತರ ತಂಡದ ಜವಾಬ್ದಾರಿ ನನ್ನ ಮೇಲಿರುತ್ತದೆ. ಹಾಗಾಗಿ, ಶ್ರೇಯಸ್ ನೆರವಿನಿಂದ ನನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂದು ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಕೊಹ್ಲಿ 125 ಎಸೆತಗಳಲ್ಲಿ 14 ಬೌಂಡರಿ 1 ಸಿಕ್ಸರ್ ನೆರವಿನಿಂದ 120 ರನ್ಗಳಿಸಿದ್ದರು. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿಯನ್ನೂ ಹಿಂದಿಕ್ಕಿ ಭಾರತದ ಪರ ಗರಿಷ್ಠ ರನ್ಗಳಿಸಿದ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.