ಹೈದರಾಬಾದ್: ಬಾಂಗ್ಲಾದೇಶದ ವೇಗದ ಬೌಲರ್ ಜಹನಾರ ಆಲಮ್ ಶನಿವಾರ 'ಈ ಟಿವಿ ಭಾರತ'ದೊಂದಿಗೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಭಾಗಿಯಾಗಿದ್ದು, ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವೈಫಲ್ಯ, ಮಹಿಳಾ ಐಪಿಎಲ್ ಹಾಗೂ ಫಿಟ್ನೆಸ್ಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಲಾಕ್ಡೌನ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಜಹನಾರ, ನಾನು ಈ ಸಂದರ್ಭದಲ್ಲಿ ಸಂತೋಷವಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬ ಸುರಕ್ಷಿತರಾಗಿದ್ದೇವೆ. ಆದರೆ ನಾನು ನತದೃಷ್ಟೆ ಏಕೆಂದರೆ , ನಾನು ನನ್ನ ಕುಟುಂಬದವರ ಜೊತೆಗಿಲ್ಲ. ಪ್ರಸ್ತುತ ಡಾಕಾದಲ್ಲಿ ಸಿಲುಕಿಕೊಂಡಿದ್ದು, ನಮ್ಮ ಮನೆಯಿಂದ ದೂರ ಉಳಿದಿದ್ದೇನೆ. ವಿಶ್ವಕಪ್ ಮುಗಿದ ಬಳಿಕ ಆಸ್ಟ್ರೇಲಿಯಾದಿಂದ ಬಂದಾಗಿನಿಂದಾಲೂ ನಾನು ಇಲ್ಲಿಯೇ ಸಿಲುಕಿದ್ದೇನೆ. ಇಲ್ಲಿನ ಪರಿಸ್ಥಿತಿ ಸರಿಯಿಲ್ಲ. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನರು ಮಾರಣಾಂತಿಕ ವೈರಸ್ಗೆ ತುತ್ತಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು ತಮ್ಮ ಕ್ರಿಕೆಟ್ ಜೀವನದ ಬಗ್ಗೆ ವಿವರಿಸಿರುವ ಅವರು, ಇದೊಂದು ತಮಾಷೆಯ ಕಥೆ, ನಾನು 14 ವರ್ಷದವಳಿದ್ದಾಗ ಮೊದಲಿಗೆ ಹ್ಯಾಂಡ್ಬಾಲ್ ಹಾಗೂ ವಾಲಿಬಾಲ್ ಆಡುತ್ತಿದ್ದೆ, ನನಗೆ ಕ್ರಿಕೆಟ್ ಅಂದರೆ ಇಷ್ಟವಿರಲಿಲ್ಲ. ಕ್ರಿಕೆಟ್ ಪಂದ್ಯಗಳನ್ನು ಟಿವಿಯಲ್ಲೂ ನೋಡುತ್ತಿರಲಿಲ್ಲ. ಆದರೆ ಬಾಂಗ್ಲಾದೇಶದ ಮಹಿಳಾ ತಂಡವನ್ನು ಕಟ್ಟುವಾಗ ಕೋಚ್ ಸಲಾವುದ್ದೀನ್ ರಾಷ್ಟ್ರೀಯ ತಂಡಕ್ಕೆ ಸೇರುವಂತೆ ತಮಗೆ ಆಹ್ವಾನ ನೀಡಿದರು. ನಾನು ಒಪ್ಪಿಕೊಂಡೆ ಎಂದರು.
ಆದರೆ ಟ್ರಯಲ್ಸ್ ವೇಳೆ ಪ್ರತಿಯೊಂದು ವಿಭಾಗದಲ್ಲೂ ನಾನು ಅನುತ್ತೀರ್ಣಳಾಗಿದ್ದೆ, ಬೌಲಿಂಗ್ ಇರಬಹುದು, ಬ್ಯಾಟಿಂಗ್ ಇರಬಹುದು, ಅಥವಾ ಫೀಲ್ಡಿಂಗ್ ಇರಬಹುದು. ಏಕೆಂದರೆ ಇದಕ್ಕೂ ಮುನ್ನ ಕ್ರಿಕೆಟ್ ಆಟ ಹೇಗಾಡುತ್ತಾರೆ ಎನ್ನುವುದನ್ನು ನಾನು ನೋಡಿರಲಿಲ್ಲ. ಆದರೆ ಕೆಲವು ಸಮಯದ ನಂತರ ನಾನು ಕೋಚ್ ಆಜ್ಞೆಯಂತೆ ಎಲ್ಲವನ್ನು ಸಾಧಿಸಿದೆ. ಒಂದು ತಿಂಗಳ ನಂತರ ನಾನು ವೇಗದ ಬೌಲರ್ ಆದೆ. ಮೊದಲ ಟೂರ್ನಿಯಲ್ಲೇ ನಾನು ಹೆಚ್ಚು ವಿಕೆಟ್ ಪಡೆದ ಬೌಲರ್ ಆದೆ ಎಂದು ಅವರು ವಿವರಿಸಿದ್ದಾರೆ.
2007ರಲ್ಲಿ ನಾನು ನ್ಯಾಷನಲ್ ಕ್ಯಾಂಪ್ ಸೇರಿಕೊಂಡೆ, 2008ರಲ್ಲಿ ಬಾಂಗ್ಲಾದೇಶದ ತಂಡದ ಭಾಗವಾದೆ ಎಂದು 37 ಪಂದ್ಯಗಳನ್ನಾಡಿರುವ ಜಹನಾರ ತಿಳಿಸಿದ್ದಾರೆ.
ಇನ್ನು 2020ರ ಟಿ-20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ಸೋಲು ಆಟದ ಒಂದು ಭಾಗ, ಆದರೆ ಟಿ-20 ವಿಶ್ವಕಪ್ನಲ್ಲಿ ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ನಾವು ನಮ್ಮ ಸಾಮರ್ಥ್ಯವನ್ನು ತೋರಿಸಲು ವಿಫಲರಾದೆವು ಎಂದು ತಿಳಿಸಿದ್ದಾರೆ.
ಇನ್ನು ಭಾರತದ ಸ್ಟಾರ್ ಆಟಗಾರ ವೈಫಲ್ಯದ ಬಗ್ಗೆಯೂ ಮಾತನಾಡಿದ್ದು, ಸ್ಮೃತಿ ಮಂಧಾನ , ಹರ್ಮನ್ ಪ್ರೀತ್ ಕೌರ್, ಜಮೀಮಾ ರೋಡ್ರಿಗಸ್ ಕೂಡ ಟಿ-20 ವಿಶ್ವಕಪ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ ಎಂದು ತಿಳಿಸಿದ್ದಾರೆ. ಭಾರತ ತಂಡ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು.
ಸಂದರ್ಶನದಲ್ಲಿ ತಮ್ಮ ಫಿಟ್ನೆಸ್ ಹಾಗೂ ಮಹಿಳಾ ಐಪಿಎಲ್ ಸೇರಿದಂತೆ ಹಲವಾರು ವಿಷಯಗಳನ್ನು ಜಹನಾರ ಈ ಟಿವಿ ಭಾರತ್ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.