ಹೈದರಾಬಾದ್ : ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟಿಗರೂ ತೋರಿದ ಧೈರ್ಯ-ಸಾಹಸದ ಆಟದ ಹಿಂದೆ ಕೇಳದ ಮತ್ತು ಮುಂದಿನ ತಲೆಮಾರುಗಳಿಗೆ ಹೇಳಬಹುದಾದ ಒಂದು ರೋಚಕ ಕಥೆಯಾಗಿದೆ. ಆಟಗಾರರ ಕುರಿತು ಗಟ್ಟಿತನ, ನಮ್ಯತೆ ಮತ್ತು ದೃಢನಿಶ್ಚಯ ಎಂಬಂತಹ ಪದಗಳು ಪದೇಪದೆ ಸುದ್ದಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡವು. ಕ್ರಿಕೆಟ್ ಇತಿಹಾಸದಲ್ಲಿ ಇಂತಹದೊಂದು ಸರಣಿ ಹಿಂದೆಂದೂ ಕಂಡಿರಲಿಲ್ಲ ಅಂದರೆ ಅತೀಶಯೋಕ್ತಿಯಲ್ಲ.
ಈ ಸರಣಿಯಲ್ಲಿ ಹಲವಾರು ಆಟಗಾರರು ಹೀರೋಗಳಾಗಿ ಕಾಣಿಸಿಕೊಂಡರು. ಅದರಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಆಸೀಸ್ ಪ್ರವಾಸ ಕೈಗೊಂಡಿದ್ದ ನವದೀಪ್ ಸೈನಿ ತಮ್ಮ ಮೊದಲ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ, ಐತಿಹಾಸಿಕ ಸರಣಿ ಜಯದ ಭಾಗವಾಗಿದ್ದರು. ಅವರು ಈ ಪ್ರವಾಸದಲ್ಲಿ ತಮಗಾದ ಅನುಭವವನ್ನು ಈಟಿವಿ ಭಾರತ ನಡೆಸಿದ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೈನಿ 2 ಪಂದ್ಯಗಳಿಂದ ಕೇವಲ 4 ವಿಕೆಟ್ ಪಡೆದಿದ್ದರು. ಇದು ಹೇಳಿಕೊಳ್ಳುವ ಸಾಧನೆ ಅಲ್ಲವಾದ್ರೂ ಪಂದ್ಯಕ್ಕಾಗಿ ಈ ವೇಗಿ ತನ್ನ ಕೈಲಾದದ್ದನ್ನೆಲ್ಲಾ ಮಾಡಿದ್ದರು. ತನ್ನ ಮುಂಚೂಣಿ ವೇಗಿಗಳಿಗೆ ವಿಶ್ರಾಂತಿ ನೀಡಲು ಬಯಸಿದಾಗಲೆಲ್ಲಾ ನಾಯಕ ಚೆಂಡು ನೀಡುತ್ತಿದ್ದದ್ದು ಸೈನಿಗೆ ಎನ್ನುವುದನ್ನು ಮರೆಯುವಂತಿಲ್ಲ.
ನಿಮ್ಮ ಗಾಯದ ಸ್ಥಿತಿ ಈಗ ಹೇಗಿದೆ? :
ನಾನು ಗಾಯಗೊಂಡಿರುವುದರಿಂದ ಎನ್‌ಸಿಎಗೆ ಹೋಗುತ್ತೇನೆ. ನನ್ನ ಗಾಯದ ಸ್ಥಿತಿಯ ಬಗ್ಗೆ ಅಲ್ಲಿಗೆ ತೆರಳಿದ ನಂತರವಷ್ಟೇ ಹೇಳಲು ಸಾಧ್ಯ.
ಕೊಹ್ಲಿ ಆಸೀಸ್ ಬಿಟ್ಟ ಮೇಲೆ ಡ್ರೆಸ್ಸಿಂಗ್ ರೂಮ್ನ ವಾತಾವರಣ ಹೇಗಿತ್ತು?
ನನಗೆ ಯಾವುದೇ ವ್ಯತ್ಯಾಸವನ್ನು ಕಂಡು ಬಂದಿಲ್ಲ. ಯಾಕೆಂದರೆ, ನೀವು ಅಲ್ಲಿ ತಂಡವಾಗಿ ಆಡುತ್ತೀರಿ ಮತ್ತು ಪಂದ್ಯಕ್ಕಾಗಿ ಹೋಗುವಾಗ 11 ಆಟಗಾರರ ಜೊತೆ ಇರುತ್ತೀರಾ. ಆ ಪಂದ್ಯಗಳಲ್ಲಿ ಪ್ರದರ್ಶನವು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ವಿರಾಟ್ ಭಯ್ಯಾ ರಜೆ ಪಡೆದಾಗ, ನೀವು ಪಂದ್ಯ ಗೆಲ್ಲಲು ಶೇ.110ರಷ್ಟು ಶ್ರಮವಹಿಸಿ ಎಂದು ಹೇಳಿದ್ದರು.
ನಾನು ವಿರಾಟ್ ಭಾಯ್ ಅವರೊಂದಿಗೆ ಚಾಟ್ ಮಾಡುತ್ತಿದ್ದೆ. ಅವರು ನನಗೆ ನೀನು ಯಾವಾಗಲೂ ಆಡುವ ರೀತಿಯಲ್ಲೇ ಆಡು ಎಂದು ಸಲಹೆ ನೀಡುತ್ತಿದ್ದರು. ಇನ್ನು, ಅಲ್ಲಿದ್ದ ಎಲ್ಲ ಆಟಗಾರರು ಕೂಡ ಪಂದ್ಯದ ಫಲಿತಾಂಶ ಏನೆಂಬುದನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಶೇ.100ರಷ್ಟು ಪ್ರಯತ್ನ ನೀಡಲು ಬಯಸಿದ್ದರು.
ನೀವು ಯಾರಾದರೂ ಹಿರಿಯ ಆಟಗಾರರ ಅನುಪಸ್ಥಿತಿಯನ್ನು ಅನುಭವಿಸಿದ್ರಾ?
ಹಿರಿಯರು ಗಾಯಗೊಂಡಾಗ ಇಂತಹ ಘಟನೆ ಸಂಭವಿಸುತ್ತದೆ. ಆದರೆ, ಒಂದು ತಂಡವಾಗಿ ಆಡುವಾಗ ಹಿರಿಯ-ಕಿರಿಯ ಎಂಬ ಪರಿಕಲ್ಪನೆ ಇರುವುದಿಲ್ಲ. ನಾವೆಲ್ಲರೂ ಒಂದು ಕುಟುಂಬವಾಗಿ ಆಡುತ್ತೇವೆ ಮತ್ತು ಪರಸ್ಪರ ಮಾರ್ಗದರ್ಶನ ಮಾಡುತ್ತೇವೆ.
ಜೊತೆಗೆ ಅಲ್ಲಿ ಕಿರಿಯರಿಗೆ ವಿಶೇಷ ವಾತಾವರಣ ರಚಿಸಲಾಗಿದೆ. ಆದ್ದರಿಂದ ಪಂದ್ಯಗಳಲ್ಲಿ ತೊಡಗಿಕೊಳ್ಳಲು ಸುಲಭವಾಗುತ್ತದೆ. ಉದಾಹರಣೆಗೆ, ಎಲ್ಲಾ ಪಂದ್ಯದ ವೇಳೆ ಎಲ್ಲದಕ್ಕೂ ನಾವು ಹೇಗೆ ಸಿದ್ಧರಾಗಿರಬೇಕು ಎಂದು ಅವರು ನಮಗೆ ತಿಳಿಸುತ್ತಾರೆ. ಪಂದ್ಯದ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆಯೂ ನಮಗೆ ತಿಳಿಸಲಾಗುತ್ತದೆ.
ಸರಣಿಯಲ್ಲಿ ನಿಮ್ಮ ಅವಿಸ್ಮರಣೀಯ ಕ್ಷಣ ಯಾವುದು?
ಆಸ್ಟ್ರೇಲಿಯಾ ಪ್ರವಾಸ ಯಾವಾಗಲೂ ನನಗೆ ವಿಶೇಷವಾಗಿರುತ್ತದೆ. ಯಾಕೆಂದರೆ, ನಾನು ಅಲ್ಲಿ ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದೆ. ಈ ಬಾರಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದೆ. ಜೊತೆಗೆ ನಾವು ಸರಣಿಯನ್ನು ಗೆದ್ದಿದ್ದೇವೆ. ಇದು ದೊಡ್ಡ ಸಾಧನೆ. ಇದನ್ನು ನಾನು ಸದಾ ನೆನೆಪಿನಲ್ಲಿಟ್ಟುಕೊಳ್ಳುತ್ತೇನೆ.
ಗಬ್ಬಾ ಟೆಸ್ಟ್ನ ಆರಂಭಕ್ಕೂ ಮೊದಲು ಮತ್ತು ನಂತರ ಡ್ರೆಸ್ಸಿಂಗ್ ರೂಮ್ ವಾತಾವರಣ ಹೇಗಿತ್ತು?
ಗಬ್ಬಾ ಟೆಸ್ಟ್ಗೂ ಮುನ್ನ ನಾವು ನಮ್ಮ ನೈಸರ್ಗಿಕ ಆಟವನ್ನು ಆಡಲು ಬಯಸಿದ್ದೆವು. ಕೊನೆಯ ದಿನದಂದು ಎಲ್ಲವೂ ಸಾಮಾನ್ಯವಾಗಿತ್ತು. ಫಲಿತಾಂಶಗಳು ಏನೇ ಇರಲಿ ನಮ್ಮ ನೈಸರ್ಗಿಕ ಆಟವನ್ನು ಆಡಲು ಚರ್ಚಿಸಿದ್ದೆವು. ರಿಷಭ್ ಪಂತ್ ಬ್ಯಾಟಿಂಗ್ ಮಾಡುವಾಗ, ಪಂದ್ಯವು ಡ್ರಾ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದವು.
ಆದರೆ, ಅವರು ಕೊನೆಯಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿ ನಮಗೂ ಕೂಡ ಪಂದ್ಯವನ್ನು ಗೆಲ್ಲಬಹುದು ಅನ್ನಿಸಿತು. ಕೊನೆಯಲ್ಲಿ ನಾವು ಪಂದ್ಯವನ್ನು ಗೆದ್ದಿದ್ದೇವೆ. ಇದು ಖುಷಿ ವಿಚಾರ. ಯಾಕೆಂದರೆ, ಈ ರೀತಿ ಏನಾದ್ರೂ ಸಂಭವಿಸಬಹುದು ಎಂದು ಯಾರೂ ಭಾವಿಸಿರಲಿಲ್ಲ. ಎಲ್ಲಾ ಸಿಬ್ಬಂದಿ, ಆಟಗಾರರು ಸಾಕಷ್ಟು ಶ್ರಮವಹಿಸಿ ನಮ್ಮ ಯಶಸ್ಸಿಗೆ ಕಾರಣರಾದರು.
ಶಾರ್ದುಲ್ ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರು 50 ರನ್ ಗಳಿಸಿದ ರೀತಿ ನೋಡಿದ್ರೆ, ಅವರು ಮುಂದೊಂದು ದಿನ ಶತಕ ಗಳಿಸಬಹುದೆಂದು ನಾನು ಭಾವಿಸುತ್ತೇನೆ. ಯಾಕೆಂದರೆ, ಶಾರ್ದುಲ್ ಅದ್ಭುತ ಆಲ್‌ರೌಂಡರ್.
ಸ್ಟೀವ್ ಸ್ಮಿತ್‌ಗೆ ಬೌಲಿಂಗ್ ಮಾಡಿದ ಅನುಭವ ಹೇಗಿತ್ತು?
ಒಳ್ಳೆಯ ಅನುಭವ. ಯಾಕೆಂದರೆ, ಅದು ನನ್ನ ಚೊಚ್ಚಲ ಪಂದ್ಯವಾಗಿತ್ತು. ಸ್ಮಿತ್‌ಗೆ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟದ ಕೆಲಸ. ಆದರೆ, ನೀವು ಒಂದು ಯೋಜನೆಯನ್ನು ಮಾಡಿ, ಅದಕ್ಕೆ ತಕ್ಕಂತೆ ನೀವು ಬೌಲ್ ಮಾಡಿದಾಗ ನೀವು ಒಳ್ಳೆಯ ಫಲಿತಾಂಶ ಪಡೆಯುತ್ತೀರಿ ಎಂಬುದು ನಿಮಗೆ ಅರಿವಾಗುತ್ತದೆ.
ಆಸ್ಟ್ರೇಲಿಯಾ ಪ್ರವಾಸ ಮುಗಿದ ನಿಮ್ಮ ಯೋಜನೆ ಏನು?
ಸದ್ಯಕ್ಕೆ, ನಾನು ನನ್ನ ಕುಟುಂಬದ ಜೊತೆಯಿರಲು ಬಯಸುತ್ತೇನೆ. ನಾನು ಮುಂಬರುವ ಸರಣಿಯಲ್ಲಿ ಇರುತ್ತೇನೆ ಅಥವಾ ಇಲ್ಲವೇ ಎಂಬುದು ಬೇರೆ ವಿಷಯ, ನನ್ನ ಗಮನ ಏನಿದ್ದರೂ ಫಿಟ್ ಆಗಿರುವುದಷ್ಟೇ..
ಈ ವರ್ಷ ಟಿ-20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಆಡುತ್ತೇನೆ ಎಂಬ ಗುರಿಯಿದೆ. ಆದರೆ, ಆ ಬಗ್ಗೆ ನಿಜಕ್ಕೂ ಈಗಲೇ ಯೋಚಿಸುತ್ತಿಲ್ಲ. ನಾನು ಫಿಟ್ ಆಗಿರುವುದರ ಕಡೆಗೆ ಗಮನ ನೀಡುತ್ತಿದ್ದೇನೆ. ಅದಕ್ಕೆ ತಕ್ಕಂತೆ ಆಡುತ್ತೇನೆ. ನಮಗೆ ಮುಂದೆ ಏಕದಿನ ಮತ್ತು ಟಿ20 ಸರಣಿಗಳು ಬರುತ್ತಿವೆ. ನಂತರ ಐಪಿಎಲ್ ಇದೆ, ಆದ್ದರಿಂದ ನಮಗೆ ವಿಶ್ವಕಪ್‌ಗೆ ಇನ್ನೂ ಸಮಯವಿದೆ . ಹಾಗಾಗಿ, ನಾನು ಹಂತ ಹಂತವಾಗಿ ಯೋಚಿಸಲು ಇಷ್ಟಪಡುತ್ತೇನೆ.