ಹೈದರಾಬಾದ್ : ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಪಂದ್ಯಕ್ಕೂ ಎಸ್‌ಆರ್‌ಹೆಚ್ ಸ್ಟಾರ್ ಭುವನೇಶ್ವರ್ ಕುಮಾರ್ ಅವರ ಬಾಲ್ಯದ ಕೋಚ್ ಸಂಜಯ್ ರಸ್ತೋಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎನ್‌ಕೌಂಟರ್‌ಗೂ ಮುಂಚಿತ ಕೆಲವು ಸಲಹೆ ನೀಡಿದ್ದಾರೆ.
ಈಟಿವಿ ಭಾರತದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ಇಬ್ಬರು ಶಿಷ್ಯರಾದ ಭುವನೇಶ್ವರ್ ಕುಮಾರ್ ಮತ್ತು ಪ್ರಿಯಂ ಗರ್ಗ್ ಇರುವ ತಂಡವಾದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
ತಮ್ಮ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನೀರಸ ಪ್ರದರ್ಶನ ತೋರಿ ಸೋಲು ಕಂಡಿರುವ ಹೈದರಾಬಾದ್ ತಂಡ ಇಂದು ಕೆಕೆಆರ್ ವಿರುದ್ಧ ಗೆಲುವು ಪಡೆದರೂ ಅಂಕಪಟ್ಟಿಯಲ್ಲಿ ಖಾತೆ ತೆರೆಯುವ ಇರಾದೆಯಲ್ಲಿದೆ.
ಇತ್ತ ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 49 ರನ್ಗಳಿಂದ ಹೀನಾಯ ಸೋಲು ಕಂಡಿದೆ. ಎಲ್ಲಾ ವಿಭಾಗದಲ್ಲೂ ದಯನೀಯ ವೈಫಲ್ಯ ಅನುಭವಿಸಿದ ಕಾರ್ತಿಕ್ ಪಡೆ ತನ್ನ ತಪ್ಪುಗಳನ್ನು ತಿದ್ದಿಕೊಂಡು ಹೈದರಾಬಾದ್ ವಿರುದ್ಧ ಗೆಲುವಿನ ಕನಸು ಕಟ್ಟಿಕೊಂಡಿದೆ.
ಹೈದರಾಬಾದ್ ತಂಡದ ಬಗ್ಗೆ ಮಾತನಾಡಿದ ರಸ್ತೋಗಿ, ಟಿ20 ಕ್ರಿಕೆಟ್ನಲ್ಲಿ ಯಾವ ಕ್ಷಣದಲ್ಲಾದ್ರೂ ಪಂದ್ಯದ ಫಲಿತಾಂಶ ಬದಲಾಗಬಹುದು. ಕಳೆದ ವರ್ಷ ಹೈದರಾಬಾದ್ ತಂಡ ತನ್ನ ಬೌಲಿಂಗ್ ಬಲದಿಂದ ಸಾಕಷ್ಟ ಪಂದ್ಯಗಳನ್ನು ಗೆದ್ದಿತ್ತು. ಆದರೆ, ಅವರು ಬ್ಯಾಟಿಂಗ್‌ನಿಂದಾಗಿ ಅನೇಕ ಪಂದ್ಯಗಳನ್ನು ಗೆದ್ದಿದ್ದಾರೆ ಎಂದು ನಾನು ಭಾವಿಸುವುದಿಲ್ಲ.
ಯಾಕೆಂದರೆ, ಕಳೆದ ವರ್ಷ ಟಾಸ್ ಗೆದ್ದ ಕೂಡಲೇ ಬೌಲಿಂಗ್ ಆಯ್ದುಕೊಂಡು ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುತ್ತಿದ್ದರು. ನಂತರ ಅವರ ಬ್ಯಾಟ್ಸ್ಮನ್ಗಳು ಪಂದ್ಯವನ್ನು ಸುಲಭವಾಗಿ ಮುಗಿಸುತ್ತಿದ್ದರು. ಹಾಗಾಗಿ, ಈ ಬಾರಿಯೂ 'ಬೌಲರ್ಗಳೇ ಹೈದರಾಬಾದ್' ತಂಡಕ್ಕೆ ಬಲ'ವಾಗಿದ್ದಾರೆ ಎಂದಿದ್ದಾರೆ.
ಇಂದಿನ ಪಂದ್ಯದಲ್ಲಿ ಯಾವ ತಂಡ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತದೆಯೋ ಆ ತಂಡ ಗೆಲುವು ಸಾಧಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದೇ ಸಂದರ್ಭದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಪ್ರಿಯಂ ಗರ್ಗ್ ಕುರಿತು ಕೆಲ ವಿಶೇಷ ಮಾಹಿತಿಯನ್ನು ಈಟಿವಿ ಭಾರತದ ಜೊತೆ ರಸ್ತೋಗಿ ಹಂಚಿಕೊಂಡಿದ್ದಾರೆ.