ಲಂಡನ್: ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಅಗಾಸ್ ಬೌಲ್ನಲ್ಲಿ ನಡೆಯುವ ಪಂದ್ಯದಲ್ಲಿ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಜೊತೆಗೆ ಮುರನೇ ವೇಗಿಯಾಗಿ ಜೇಮ್ಸ್ ಆಂಡರ್ಸನ್ ಕೂಡಿಕೊಳ್ಳುವ ಸಾಧ್ಯತೆ ಇರುವುದರಿಂದ ಬ್ರಾಡ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ದಿ ಗಾರ್ಡಿಯನ್ ವರದಿಯ ಪ್ರಕಾರ, ಬ್ರಾಡ್ ಎಂಟು ವರ್ಷಗಳಲ್ಲಿ ತವರಿನ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಅವರಿಗೆ ಆರಂಭಿಕ ಬೌಲಿಂಗ್ ಜವಾಬ್ದಾರಿ ನೀಡುವ ಉದ್ದೇಶದಿಂದಾಗಿ ಬ್ರಾಡ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.
ಈಗಾಗಲೇ 13 ಮಂದಿಯ ಇಂಗ್ಲೆಂಡ್ ತಂಡವನ್ನು ಅಂತಿಮಗೊಳಿಸಿದ್ದು, ತಂಡದ ಏಕೈಕ ಸ್ಪಿನ್ನರ್ ಆಗಿ ಡೊಮ್ ಬೆಸ್ ಕಾಣಿಸಿಕೊಂಡಿದ್ದಾರೆ.
ಬುಧವಾರದ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದ ಅಂತಿಮ ನಿರ್ಧಾರವನ್ನು ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮತ್ತು ನಾಯಕ ಬೆನ್ ಸ್ಟೋಕ್ಸ್ ತೆಗೆದುಕೊಳ್ಳಲಿದ್ದಾರೆ.
13 ಜನರ ಇಂಗ್ಲೆಂಡ್ ತಂಡ ಇಂತಿದೆ:
ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜೋಫ್ರಾ ಆರ್ಚರ್, ರೋರಿ ಬರ್ನ್ಸ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್ (ವಿ.ಕೀ), ಜಾಕ್ ಕ್ರಾಲೆ, ಜೋ ಡೆನ್ಲಿ, ಒಲ್ಲಿ ಪೋಪ್, ಡೊಮ್ ಸಿಬ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.