ಬೆಕೆನ್ಹಾಮ್: 19 ವರ್ಷದೊಳಗಿನ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 278 ರನ್ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ 102, ನಾಯಕ ಪ್ರಿಯಂ ಗರ್ಗ್ 51, ತಿಲಕ್ ವರ್ಮಾ 52 ರನ್ಗಳಿಸಿದ್ದರು.
279 ರನ್ಗಳ ಟಾರ್ಗೆಟ್ ಪಡೆದಿದ್ದ ಇಂಗ್ಲೆಂಡ್ ಯುವ ತಂಡ ಚೇಸಿಂಗ್ ಮಾಡುವ ವೇಳೆ ಮಳೆ ಬಂದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ, ಓವರ್ ಮಿತಿಯನ್ನು 42 ಓವರ್ ಗಳಿಸಿ 214 ರನ್ಗಳ ಗುರಿ ನೀಡಲಾಗಿತ್ತು.
ಈ ಮೊತ್ತವನ್ನು ಇಂಗ್ಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು ಇನ್ನೂ 3 ಎಸೆತಗಳಿರುವಂತೆ ಗುರಿ ತಲುಪಿ ಟೂರ್ನಿಯಲ್ಲಿ ತನ್ನ ಅಭಿಯಾನ ಮುಗಿಸಿತು. ಆರಂಭಿಕರಾದ ಬೆನ್ ಚಾರ್ಲೆಸ್ವರ್ತ್ 46, ಟಾಮ್ ಕ್ಲಾರ್ಕ್ 66 ಡಾನ್ ಮೌಸ್ಲೆ 74 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತ ತಂಡ ಈ ಪಂದ್ಯವನ್ನು ಸೋತರೂ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವುದರಿಂದ ಫೈನಲ್ಗೇರಿತು. 11 ಅಂಕಗಳಿಸಿದ್ದ ಬಾಂಗ್ಲಾದೇಶ ತಂಡ ಮೊದಲ ತಂಡವಾಗಿ ಫೈನಲ್ಗೇರಿತ್ತು.
ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ-ಬಾಂಗ್ಲಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.