ಲಂಡನ್: ಶ್ರೀಲಂಕಾ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಭಾರತಕ್ಕೆ ಬರುವ ಇಂಗ್ಲೆಂಡ್ ತಂಡದ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್ ನಿಯಮ ಪೂರ್ಣಗೊಳಿಸಿಬೇಕಿದ್ದು, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ತರಬೇತಿ ಪಡೆಯಲು ಕೇವಲ ಮೂರು ದಿನಗಳು ಮಾತ್ರ ಸಿಗಲಿದೆ.
ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗಾಗಿ ಇಂಗ್ಲೆಂಡ್ ತಂಡವು ಬುಧವಾರ ಚೆನ್ನೈಗೆ ಹಾರಲಿದ್ದು, ಆಗಮನದ ನಂತರ ಕಟ್ಟುನಿಟ್ಟಿನ ನಿರ್ಬಂಧವನ್ನು ಎದುರಿಸಲಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ರೋರಿ ಬರ್ನ್ಸ್ ಅವರು ಭಾನುವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದು, ತಮ್ಮ ಹೋಟೆಲ್ನಲ್ಲಿ ಕ್ವಾರಂಟೈನ್ ನಿಯಮ ಪೂರ್ಣಗೊಳಿಸಿದ ನಂತರ ಐದು ದಿನಗಳ ತರಬೇತಿ ಪಡೆಯಲಿದ್ದಾರೆ. ಆದರೆ, ಆಗಮಿಸಿದ 48 ಗಂಟೆಗಳ ನಂತರ ಇಂಗ್ಲೆಂಡ್ ಆಟಗಾರರಿಗೆ ಶ್ರೀಲಂಕಾದಲ್ಲಿ ತರಬೇತಿ ನೀಡಲು ಅವಕಾಶ ನೀಡಲಾಯಿತು.
ಸಾಂಕ್ರಾಮಿಕ ರೋಗದ ಮಧ್ಯೆ ಭಾರತದಲ್ಲಿ ನಡೆಯುವ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದ್ದು, ಎಲ್ಲಾ ಆಟಗಾರರನ್ನು ಆರು ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಮೂರು ಬಾರಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ.
ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, 13 ರಿಂದ 17 ರ ವರೆಗೆ 2ನೇ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾವಾದ್ನಲ್ಲಿ 3ನೇ ಟೆಸ್ಟ್ ಮತ್ತು ಮಾರ್ಚ್ 4 ರಿಂದ 8 ವರೆಗೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಅಹಮದಾಬಾದ್‌ನಲ್ಲಿ ಐದು ಪಂದ್ಯಗಳ ಟಿ-20 ಸರಣಿ ಮತ್ತು ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.