ಸೌತಾಂಪ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ 269 ರನ್ಗಳ ಜಯ ಸಾಧಿಸಿದ ಇಂಗ್ಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆದ್ದ ರೋಟ್ ಪಡೆ 80 ಅಂಕ ಪಡೆದಿತ್ತು. ಒಟ್ಟಾರೆ ಲೀಗ್ನಲ್ಲಿ 226 ಅಂಕ ಸಂಪಾದಿಸಿರುವ ಇಂಗ್ಲೆಂಡ್ ತಂಡ, ಭಾರತ(360) ಹಾಗೂ ಆಸ್ಟ್ರೇಲಿಯಾ(296) ನಂತರದ ಸ್ಥಾನ ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್ ತಂಡ 180 ಅಂಕಗಳೊಂದಿದೆ ನಾಲ್ಕನೇ ಸ್ಥಾನದಲ್ಲಿದೆ.
ಈ ಸರಣಿಗೂ ಮುನ್ನ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಆ್ಯಶಸ್ ಸರಣಿಯಲ್ಲಿ 2-2ರಲ್ಲಿ ಡ್ರಾ ಸಾಧಿಸಿತ್ತು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಲ್ಲಿ ಗೆಲುವು ಸಾಧಿಸಿತ್ತು. ಇನ್ನು ವೆಸ್ಟ್ ಇಂಡೀಸ್ ತನ್ನ ಮೊದಲ ಸರಣಿಯಲ್ಲಿ ಭಾರತದೆದುರು 2-0 ಸೋಲು ಕಂಡಿತ್ತು.
ಇಂಗ್ಲೆಂಡ್ ತಂಡ ತನ್ನ ಮುಂದಿನ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಆಗಸ್ಟ್ 5ರಿಂದ ಆರಂಭವಾಗಲಿದೆ.
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರತಿ ಸರಣಿಯಲ್ಲೂ 120 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯಕ್ಕೆ 60 ಅಂಕ ಹಾಗೂ 5 ಪಂದ್ಯಗಳ ಸರಣಿಯಲ್ಲಿ ಪಂದ್ಯಕ್ಕೆ 24 ಅಂಕ ಹಾಗೂ 4 ಪಂದ್ಯಗಳ ಸರಣಿಯಲ್ಲಿ ಪಂದ್ಯಕ್ಕೆ 30 ಅಂಕಗಳು ಸಿಗಲಿದೆ.