ಮೆಲ್ಬೊರ್ನ್: ಪ್ರಪಂಚದಾದ್ಯಂತ ಕೊರೊನಾ ವೈರಸ್ ರೌದ್ರನರ್ತನ ಜೋರಾಗಿದ್ದು, ಈಗಾಗಲೇ 3 ಸಾವಿರಕ್ಕೂ ಅಧಿಕ ಜನರ ಜೀವ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಇಂಗ್ಲೆಂಡ್ ತಂಡ ಹೊಸದೊಂದು ನಿರ್ಧಾರ ಕೈಗೊಂಡಿದೆ.
ಮಾರ್ಚ್ 19ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಅಲ್ಲಿನ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರಲು ನಿರ್ಧರಿಸಿದೆ. ಬದಲಾಗಿ ಮುಷ್ಠಿ ಮೂಲಕ ಹೈ ಹೇಳಲು ನಿರ್ಧರಿಸಿದೆ. ಕೊರೊನಾ ವೈರಸ್ನಿಂದಾಗಿ ಆಂಗ್ಲ ಪಡೆ ಕೈಗೊಂಡಿದೆ.
ಈ ವಿಷಯದ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಜೋ ರೂಟ್, ನಮ್ಮ ಆಟಗಾರರು ಶ್ರೀಲಂಕಾ ಪ್ರವಾಸದ ವೇಳೆ ಅಲ್ಲಿನ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದಿಲ್ಲ. ಕೇವಲ ಮುಷ್ಠಿ ತೋರಿಸುವ ಮೂಲಕ ಶುಭ ಕೋರಲು ನಿರ್ಧರಿಸಿದ್ದು, ಸರಿಯಾಗಿ ಕೈ ತೊಳೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಜತೆ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿರುವ ಇಂಗ್ಲೆಂಡ್ ತಂಡದ ಪ್ಲೇಯರ್ಸ್ ಜ್ವರದಿಂದ ಬಳಲಿದ್ದೇ ಇಂತಹ ನಿರ್ಧಾರಕ್ಕೆ ಕಾರಣವಾಗಿದೆ.