ಸೌತಾಂಪ್ಟನ್: ಮ್ಯಾಂಚೆಸ್ಟರ್ನಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಮೊದಲ ಟೆಸ್ಟ್ ಗೆದ್ದಿರುವ ಆತಿಥೇಯ ಇಂಗ್ಲೆಂಡ್ ತಂಡದ ಇಂದಿನಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ನಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಆಲೋಚನೆಯಲ್ಲಿದೆ.
ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸೋಲಿನತ್ತ ಮುಖ ಮಾಡಿದ್ದ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದರು. ಇವರ ಭರ್ಜರಿ ಆಟದ ನರೆವಿನಿಂದ ಇಂಗ್ಲೆಂಡ್ 3 ವಿಕೆಟ್ಗಳಿಂದ ಪ್ರವಾಸಿ ಪಾಕ್ ತಂಡವನ್ನು ಬಗ್ಗುಬಡಿದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಸ್ಟೋಕ್ಸ್ ಕೌಟುಂಬಿಕ ಕಾರಣಗಳಿಂದ ನ್ಯೂಜಿಲ್ಯಾಂಡ್ಗೆ ತೆರಳುತ್ತಿದ್ದಾರೆ. ಅವರು ಮ್ಯಾಂಚೆಸ್ಟರ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರೂ ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು. ಈ ಪಂದ್ಯದಲ್ಲಿ ರೂಟ್ ಪಡೆ ಸ್ಟೋಕ್ಸ್ರನ್ನು ಮಿಸ್ ಮಾಡಿಕೊಳ್ಳಲಿದೆ.
ಇನ್ನು ಸ್ಟೋಕ್ಸ್ ಬದಲಿಗೆ ಒಲ್ಲಿ ರಾಬಿನ್ಸನ್ ಎರಡನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಮೊದಲ ಪಂದ್ಯವನ್ನು ಕೈಯ್ಯಾರೆ ಕಳೆದುಕೊಂಡಿರುವ ಪಾಕ್ ಸರಣಿಯನ್ನು ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹಾಗಾಗಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಯಶಸ್ವಿಯಾಗಿದ್ದ ಪಾಕ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಎರಡರಲ್ಲೂ ವೈಫಲ್ಯ ಅನುಭವಿಸಿತ್ತು. ಹಾಗಾಗಿ ಎರಡನೇ ಟೆಸ್ಟ್ನಲ್ಲಿ ಇಬ್ಬರು ಸ್ಪಿನ್ನರ್ಗಳ ಬದಲಾಗಿ ಒಬ್ಬಸ್ಪಿನ್ನರ್ ಆಯ್ಕೆ ಮಾಡಿ, ಮತ್ತೊಬ್ಬ ಬ್ಯಾಟ್ಸ್ಮನ್ ಆಯ್ಕೆ ಮಾಡಿಕೊಳ್ಳಬೇಕೆಂದು ಈಗಾಗಲೆ ಪಾಕ್ ಮಾಜಿ ನಾಯಕ ವಾಸೀಮ್ ಅಕ್ರಮ ಸಲಹೆ ನೀಡಿದ್ದಾರೆ.
ಇನ್ನು ನಾಯಕ ಅಜರ್ ಅಲಿ ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವುದು ಪಾಕ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಉಳಿದಂತೆ ಆರಂಭಿಕ ಶಾನ್ ಮಸೂದ್, ಬಾಬರ್ ಅಜಮ್ ಉತ್ತಮ ಲಯದಲ್ಲಿದ್ದಾರೆ. ಇವರ ಜೊತೆ ಇತರ ಬ್ಯಾಟ್ಸ್ಮನ್ಗಳು ಸಾಥ್ ನೀಡಿದರೆ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ನೆರವಾಗಲಿದೆ.
ಪಾಕಿಸ್ತಾನ ಕಳೆದ 10 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಸೋತಿಲ್ಲ. 2016ರಲ್ಲಿ ಪಾಕ್ ತಂಡ 4 ಪಂದ್ಯಗಳ ಸರಣಿಯಲ್ಲಿ 2-2ರಲ್ಲಿ ಡ್ರಾ ಸಾಧಿಸಿದ್ದರೆ, 2018ರಲ್ಲಿ 2 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿ ಪಾಕ್ ಸೋತರೆ ಇಂಗ್ಲೆಂಡ್ ನೆಲದಲ್ಲಿ 10 ವರ್ಷಗಳ ಬಳಿಕ ಮೊದಲ ಸರಣಿ ಕಳೆದುಕೊಳ್ಳಲಿದೆ.