ಸೌತಾಂಪ್ಟನ್: ಪಾಕಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ನಾಯಕ ಬಾಬರ್ ಅಜಮ್(56), ಫಾಖರ್ ಝಮಾನ್ 36 ಹಾಗೂ ಮೊಹಮ್ಮದ್ ಹಫೀಜ್(36 ಎಸೆತಗಳಲ್ಲಿ 69 ರನ್) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ 2 ಎಸೆತ ಬಾಕಿ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
196 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಬ್ಯಾರ್ಸ್ಟೋವ್(44) ಹಾಗೂ ಟಾಮ್ ಬಾಂಟನ್(16) 68 ರನ್ಗಳ ಜೊತೆಯಾಟ ನಡೆಸಿದರು. ಆದರೆ ಶದಾಬ್ ಖಾನ್ ಇವರಿಬ್ಬರನ್ನು ಒಂದೇ ಓವರ್ನಲ್ಲಿ ಔಟ್ ಮಾಡುವ ಮೂಲಕ ಪಾಕ್ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಈ ಹಂತದಲ್ಲಿ ಒಂದಾದ ನಾಯಕ ಮಾರ್ಗನ್ ಹಾಗೂ ಡೇವಿಡ್ ಮಲಾನ್ 3ನೇ ವಿಕೆಟ್ ಜೊತೆಯಾಟದಲ್ಲಿ 112 ರನ್ ಪೇರಿಸಿದರು. ಈ ಮೂಲಕ ಪಾಕಿಸ್ತಾನದ ಕೈಯಲ್ಲಿದ್ದ ಗೆಲುವನ್ನು ಇಂಗ್ಲೆಂಡ್ ಕಸಿದುಕೊಂಡಿತು. ಮಾರ್ಗನ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 66 ರನ್ಗಳಿಸಿದರೆ, ಮಲಾನ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಔಟಾಗದೆ 54 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಾಕ್ ಪರ ಶದಾಬ್ ಖಾನ್ 34 ರನ್ ನೀಡಿ 3 ವಿಕೆಟ್ ಪಡೆದರೆ, ಹ್ಯಾರೀಸ್ ರವೂಫ್ 34 ರನ್ ನೀಡಿ 2 ವಿಕೆಟ್ ಪಡೆದರು. ಇಯಾನ್ ಮಾರ್ಗನ್ (66) ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ದಾಖಲೆಯ ಜಯ:
ಇಂಗ್ಲೆಂಡ್ ತಂಡ 196 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ತಂಡ ಎನಿಸಿಕೊಂಡಿತು. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ 2010ರ ಟಿ-20 ವಿಶ್ವಕಪ್ ವೇಳೆ 192 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು. ಇಂಗ್ಲೆಂಡ್ ನೆಲದಲ್ಲಿ ಇದು 2ನೇ ಗರಿಷ್ಠ ಚೇಸ್ ಕೂಡ ಆಗಿದೆ. 2018ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 201 ರನ್ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿದ್ದು ದಾಖಲೆಯಾಗಿದೆ.