ಅಹಮದಾಬಾದ್: ಟೀಂ ಇಂಡಿಯಾ ವಿರುದ್ಧ ನಡೆದ 4ನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಇಂಗ್ಲೆಂಡ್ ತಂಡಕ್ಕೆ ಪಂದ್ಯದ ಶೇ.20ರಷ್ಟು ದಂಡ ವಿಧಿಸಲಾಗಿದೆ.
ಗುಜರಾತ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ನಿಧಾನಗತಿ ಬೌಲಿಂಗ್ ಮಾಡಿದ್ದು, ಒಂದು ಓವರ್ ತಡವಾಗಿ ಮಾಡಿತ್ತು. ಹೀಗಾಗಿ ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಚಾಂಪಿಯನ್ ನಾಜಿಮ್ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಹಾಕಿದ ಭಾರತದ ನಿಖಾತ್!
ಪಂದ್ಯದಲ್ಲಿ ಇಂಗ್ಲೆಂಡ್ ತಂಡ 8ರನ್ಗಳ ಸೋಲು ಕಂಡಿದ್ದು, ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸಿದೆ. ಇದರ ಜತೆಗೆ ನಿಗದಿತ ಸಮಯದಲ್ಲಿ 20 ಓವರ್ ಮಾಡಲು ಸಾಧ್ಯವಾಗದೇ ಮಂದಗತಿ ಬೌಲಿಂಗ್ ಮಾಡಿ ಶಿಕ್ಷೆಗೊಳಗಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಅನುಸಾರವಾಗಿ ತಂಡಗಳು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ದಂಡ ಕಟ್ಟಿಟ್ಟ ಬುತ್ತಿ. ಇದೀಗ ಇಂಗ್ಲೆಂಡ್ ತಂಡದ ಎಲ್ಲ ಆಟಗಾರರ ಪಂದ್ಯದ ಸಂಭಾವನೆಯ ಶೇ. 20 ರಷ್ಟು ಹಣ ನೀಡಬೇಕಿದೆ. ಮೂರನೇ ಟಿ-20 ಪಂದ್ಯದಲ್ಲೂ ಟೀಂ ಇಂಡಿಯಾ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡದ ಕಾರಣಕ್ಕಾಗಿ ತಂಡದ ಶೇ.10ರಷ್ಟು ದಂಡಕ್ಕೊಳಗಾಗಿತ್ತು.
ಉಭಯ ತಂಡಗಳ ನಡುವೆ ನಾಳೆ ಕೊನೆಯ ಟಿ-20 ಪಂದ್ಯ ನಡೆಯಲಿದ್ದು, ಇದರಲ್ಲಿ ಗೆಲ್ಲುವ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ.