ಮುಂಬೈ: ಐಪಿಎಲ್ ಮುಗಿಸಿ ದುಬೈನಿಂದ ಬಂದಿದ್ದ ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ(DRI) ಗುರುವಾರ ತಡೆಹಿಡಿದು ವಿಚಾರಣೆ ನಡೆಸಿದೆ. ಮೂಲಗಳ ಪ್ರಕಾರ ಕೃನಾಲ್ ಚಿನ್ನ ಸೇರಿದಂತೆ ಇತರೆ ಬೆಲೆ ಬಾಳುವ ಅಜ್ಞಾತ ವಸ್ತುಗಳನ್ನು ಅವರು ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡ್ ಹಾರ್ದಿಕ್ ಪಾಂಡ್ಯ ಅವರ ಸಹೋದರನಾಗಿರುವ ಬರೋಡ ಕ್ರಿಕೆಟಿಗನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಜೆ 5 ಗಂಟೆ ವೇಳೆ ತಡೆಹಿಡಿಯಲಾಗಿದೆ. ಇವರು ಮಂಗಳವಾರ ಅಂತ್ಯಗೊಂಡ 13ನೇ ಆವೃತ್ತಿಯಲ್ಲಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಭಾಗವಾಗಿದ್ದರು.
ಮೂಲಗಳ ಪ್ರಕಾರ ಕೃನಾಲ್ ಪಾಂಡ್ಯ ಚಿನ್ನದ ಸರ ಸೇರಿದಂತೆ ಕೆಲವು ಬೆಲೆಬಾಳುವ ವಸ್ತುಗಳನ್ನು ಖರೀದಿಸಿದ್ದಾರೆಂದು ವರದಿಯಾಗಿದೆ. ಈ ವಸ್ತುಗಳ ಮೌಲ್ಯ ಒಂದು ದೊಡ್ಡ ಮೊತ್ತವಾಗಿದ್ದು, ಇದು ಭಾರತೀಯ ಕಾನೂನುಗಳ ಪ್ರಕಾರ ವಿದೇಶದಲ್ಲಿ ಖರೀದಿಸಲು ಅನುಮತಿ ನೀಡಿರುವ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಈ ವಿಷಯವನ್ನು ಗಮನಕ್ಕೆ ತಂದ ಕೂಡಲೇ ಪಾಂಡ್ಯ ತಮಗೆ ಆ ನಿಯಮಗಳು ತಿಳಿದಿಲ್ಲವೆಂದು ಒಪ್ಪಿಕೊಂಡು ಕ್ಷಮೆಯಾಚಿಸಿದಲ್ಲದೆ, ಈ ತಪ್ಪಿಗೆ ದಂಡವನ್ನು ಪಾವತಿಸಲು ಸಹ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಂಡ್ಯ ತಪ್ಪೊಪ್ಪಿಕೊಂಡು, ಇಂತಹ ದೋಷಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ನಂತರ ಡಿಆರ್ಐ ಅವರನ್ನು ಬಿಡಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.