ನವದೆಹಲಿ: 2016ರಿಂದ ಇಲ್ಲಿಯವರೆಗೆ ಎರಡು ಬಾರಿ ಐಸಿಸಿ ಮುಖ್ಯಸ್ಥ ಹುದ್ದೆಯಲ್ಲಿರುವ ಭಾರತದ ಶಶಾಂಕ್ ಮನೋಹರ್ 3ನೇ ಅವಧಿಗೆ ಮುಂದುವರೆಯದಿರಲು ನಿರ್ಧಾರಿಸಿದ್ದಾರೆ.
ಶಶಾಂಕ್ ಮನೋಹರ್ 2016ರಲ್ಲಿ ಐಸಿಸಿಯ ಮೊದಲ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ 2018ರಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿ ಮತ್ತೆ 2ನೇ ಅವಧಿಗೂ ಅವರೇ ಹುದ್ದೆ ಅಲಂಕರಿಸಿದ್ದರು. ಐಸಿಸಿ ಮಂಡಳಿಯ ನಿರ್ದೇಶಕರು, ನನಗೆ ಮುಂದಿನ ಅವಧಿಗೂ ಮುಖ್ಯಸ್ಥನಾಗಿ ಮುಂದುವರಿಯುವುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮತ್ತೆ ಎರಡು ವರ್ಷದ ಅವಧಿಗೆ ಮುಂದುವರೆಯಲು ನಾನು ತಯಾರಿಲ್ಲ ಎಂದು ತಿಳಿಸಿದ್ದೇನೆ ಅಂತಾ ಸ್ವತಃ ಶಶಾಂಕ್ ಮನೋಹರ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ನಾನು 5 ವರ್ಷಗಳಿಂದ ಐಸಿಸಿ ಮುಖ್ಯಸ್ಥನಾಗಿದ್ದೇನೆ. 2020 ಮೇ ತಿಂಗಳಿಗೆ ನನ್ನ ಅವಧಿ ಮುಗಿಯಲಿದ್ದು, ಜೂನ್ನಿಂದ ನಾನು ಮತ್ತೆ ಐಸಿಸಿ ಮುಖ್ಯಸ್ಥನಾಗಿ ಮುಂದುವರಿಯಲು ಬಯಸುವುದಿಲ್ಲ. ನನ್ನ ಬಳಿಕ ಯಾರು ಮುಖ್ಯಸ್ಥರಾಗಲಿದ್ದಾರೆ ಎಂಬುದು ಮೇ ತಿಂಗಳಲ್ಲಿ ತಿಳಿಯಲಿದೆ ಎಂದು ಶಶಾಂಕ್ ಮನೋಹರ್ ತಿಳಿಸಿದ್ದಾರೆ.