ನವದೆಹಲಿ: ಬಿಸಿಸಿಐ ನೀತಿ ಅಧಿಕಾರಿ ಹಾಗೂ ಒಂಬುಡ್ಸ್‌ಮನ್ ಆಗಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ಅವರ ಅಧಿಕಾರವಧಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
ನನ್ನ ಒಪ್ಪಂದವನ್ನು 12 ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕೆ ನಾನು ಒಪ್ಪಿಗೆ ನೀಡಿದ ನಂತರ ಕಳೆದ ವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಅವರು ಪ್ರಮುಖ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸದ್ಯಕ್ಕೆ ನಾನು ವಿಚಾರಣೆಯನ್ನು ಪ್ರಾರಂಭಿಸಬೇಕಾಗಿಲ್ಲ. ನನ್ನ ಅಧಿಕಾರವಧಿ ಮುಗಿದು ಎರಡು ತಿಂಗಳ ಅಂತರವಿದ್ದರಿಂದ ಬಾಕಿ ಇರುವ ವಿಷಯಗಳನ್ನು ಗಮನಿಸಬೇಕು ಮತ್ತು ಅದಕ್ಕನುಗುಣವಾಗಿ ಮುಂದಿನ ಕ್ರಮಗಳನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.
ಜೈನ್ ಒಂಬುಡ್ಸ್‌ಮನ್ ಮತ್ತು ನೈತಿಕ ಅಧಿಕಾರಿಯಾದ ಮೇಲೆ ಕೆ.ಎಲ್.ರಾಹುಲ್-ಹಾರ್ದಿಕ್ ಪಾಂಡ್ಯ ಮಾಡಿದ್ದ ಟೀಕೆಗಳಿಗೆ ಸಂಬಂಧಿಸಿದ ಪ್ರಕರಣವನ್ನು ಅವರು ವಿಚಾರಣೆ ನಡೆಸಿದ್ದರು. ಮಾಜಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ವಿರುದ್ಧ ಕೇಳಿ ಬಂದಿದ್ದ ಹಿತಾಸಕ್ತಿ ಸಂಘರ್ಷದ ಪ್ರಕರಣಗಳನ್ನು ಜೈನ್ ನಿಭಾಯಿಸಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ವಿಚಾರಣೆಗಳನ್ನು ನಡೆಸುವುದಿಲ್ಲ ಅವರು ಸ್ಪಷ್ಟಪಡಿಸಿದ್ದಾರೆ.