ಬ್ರಿಸ್ಬೇನ್: ಕುಟುಂಬದಿಂದ ದೂರವಿದ್ದು, ಬಯೋಬಬಲ್ನಲ್ಲಿ ಕಾಲ ಕಳೆಯುವುದು ಅತ್ಯಂತ ಸವಾಲಿನ ಕೆಲಸ. ಆದರೆ ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಹಲವಾರು ಆಸ್ಟ್ರೇಲಿಯನ್ನರು ಸಹಾ ಐಪಿಎಲ್ನಿಂದಲೂ ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕ್ವೀನ್ಸ್ಲ್ಯಾಂಡ್ನಲ್ಲಿ ಇಂಗ್ಲೆಂಡ್ನ ರೂಪಾಂತರ ಕೊರೊನಾ ಪ್ರಕರಣ ಪತ್ತೆಯಾದ ನಂತರ ರಾಜ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರಿಗೆ ಕಠಿಣ ಕ್ವಾರಂಟೈನ್ ನಿಯಮಗಳನ್ನು ಹೇರಲಾಗಿದೆ. ಆಟಗಾರರಿಗೆ ಆಯೋಜಕರು ಕೇವಲ ಮೂಲಭೂತ ಸೌಲಭ್ಯಗಳನ್ನಷ್ಟೇ ಒದಗಿಸಿಕೊಡುತ್ತಿದ್ದಾರೆ. ಈ ಕುರಿತು ಟೀಮ್ ಮ್ಯಾನೇಜ್ಮೆಂಟ್ ಬಿಸಿಸಿಐಗೆ ದೂರು ನೀಡಿದ್ದು, ಗಂಗೂಲಿ ಸೇರಿದಂತೆ ಹಲವಾರು ಬಿಸಿಸಿಐ ಅಧಿಕಾರಿಗಳು ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮಾತುಕತೆ ನಡೆಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಪತ್ನಿ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿ ಅಲಿಸ್ಸಾ ಹೀಲಿ ಭಾರತೀಯರ ದೂರಿಗೆ ಅಸಮಾಧಾನ ವ್ಯಕ್ತಪಡಿಸಿ, ತಾವೂ ಕೂಡ ಅದೇ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಿದ್ದೇವೆ, ನಾವು ಬದುಕುಳಿದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಆಸ್ಟ್ರೇಲಿಯಾ ಪುರುಷರ ಟೆಸ್ಟ್ ತಂಡದ ನಾಯಕ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.
"ನಾನು ಆ ಕಮೆಂಟ್‌ಗಳನ್ನು ಎಲ್ಲೂ ನೋಡಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಭಾರತೀಯ ಆಟಗಾರರಿಂದ ಯಾವುದೇ ದೂರುಗಳನ್ನು ನಾನು ಕೇಳಿಲ್ಲ. ಆದರೆ ಅವರಿಗೆ ಕುಟುಂಬಗಳಿಂದ ದೂರವಿರುವುದು ಕ್ವಾರಂಟೈನ್ ಜೀವನ ಸವಾಲಿನ ಸಂಗತಿಯಾಗಿದೆ"ಎಂದು ಪೇನ್ ಹೇಳಿದರು.
"ಅವರು ಅನುಭವಿಸುತ್ತಿರುವ ತೊಂದರೆಗಳೇನು ಎಂಬುದು ನನಗೆ ತಿಳಿದಿದೆ. ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಂತೆಯೇ ಭಾರತೀಯರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಇದು ಖಂಡಿತ ಕಷ್ಟ, ಆದರೆ ಭಾರತೀಯ ಆಟಗಾರರಿಂದ ನಾನು ಈ ರೀತಿಯ ಕಮೆಂಟ್‌ಗಳನ್ನು ನೇರವಾಗಿ ಕೇಳಿಲ್ಲ" ಎಂದು ಆಸೀಸ್ ತಂಡದ ನಾಯಕ ಹೇಳಿದರು.
ಇದನ್ನೂ ಓದಿ: ಗಾಯಗೊಂಡ ಸಿಂಹಗಳು vs ಸೋಲಿಲ್ಲದ ಸರದಾರರು: ಹೊಸ ದಶಕದ ಚೊಚ್ಚಲ ಸರಣಿ ಗೆಲ್ಲೋರು ಯಾರು?