ನವದೆಹಲಿ: ಎಲ್ಲಾ ವಿಷಯಗಳಲ್ಲೂ ನೇರವಾಗಿ ಮಾತನಾಡುವ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೇಲೆ ಸಿಡಿದೆದ್ದಿದ್ದಾರೆ.
![Virat kohli](https://etvbharatimages.akamaized.net/etvbharat/prod-images/7630037_twdfdfdfdf.jpg)
ವಿರಾಟ್ ಕೊಹ್ಲಿ ಓರ್ವ ಉತ್ತಮ ಬ್ಯಾಟ್ಸ್ಮನ್. ಆದರೆ ಟೀಂ ಇಂಡಿಯಾ ತಂಡದ ಕ್ಯಾಪ್ಟನ್ ಆಗಿ ಕೊಹ್ಲಿ ಸಾಧನೆ ಮಾಡಿರುವುದು ಶೂನ್ಯ ಎಂದಿದ್ದಾರೆ ಗಂಭೀರ್. ಐಸಿಸಿ ಆಯೋಜನೆ ಮಾಡಿದ್ದ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಸೇರಿದಂತೆ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ವಿಫಲಗೊಂಡಿದ್ದಾರೆ ಎಂದಿದ್ದಾರೆ.
![Gautam Gambhir](https://etvbharatimages.akamaized.net/etvbharat/prod-images/gambhir2_1506newsroom_1592225853_14.jpg)
ವೈಯಕ್ತಿಕ ಸಾಧನೆಗಿಂತಲೂ ತಂಡಕ್ಕಾಗಿ ಆಡಬೇಕಿದೆ. ಪ್ರಮುಖವಾದ ಸರಣಿಗಳಲ್ಲಿ ತಂಡ ಗೆಲ್ಲಿಸುವ ಸಾಮರ್ಥ್ಯ ಇರುವವನೇ ನಿಜವಾದ ಕ್ಯಾಪ್ಟನ್ ಎಂದು ಗಂಭೀರ್ ಹೇಳಿದ್ದಾರೆ. ಇದೇ ವೇಳೆ ಧೋನಿ ಕುರಿತು ಮಾತನಾಡಿರುವ ಗಂಭೀರ್, ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಿದ್ದರೆ ಇಂದು ಅನೇಕ ದಾಖಲೆ ಬ್ರೇಕ್ ಆಗುತ್ತಿದ್ದವು ಎಂದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಬಹುಪಾಲು 5 ಹಾಗೂ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು, 350ಕ್ಕೂ ಹೆಚ್ಚು ಪಂದ್ಯಗಳಿಂದ 10773 ರನ್ ಗಳಿಸಿದ್ದಾರೆ.
![MS Dhoni](https://etvbharatimages.akamaized.net/etvbharat/prod-images/07:04_ms-dhoni2_1506newsroom_1592225853_725.jpeg)
ನಾಯಕನಾಗಿ ಕೂಡ ಧೋನಿ ಅನೇಕ ಮಹತ್ವದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ. ಒಂದು ವೇಳೆ ಧೋನಿಗೆ ನಾಯಕತ್ವ ನೀಡದೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅವಕಾಶ ಮಾಡಿಕೊಟ್ಟಿದ್ದರೆ ಅವರೊಬ್ಬ ಅದ್ಭುತ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮುತ್ತಿದ್ದರು ಎಂದಿದ್ದಾರೆ. ವಿಶ್ವ ಕ್ರಿಕೆಟ್ ಅವರಿಂದ ಬಹಳಷ್ಟು ಮಿಸ್ ಮಾಡಿಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.