ಕೋಲ್ಕತ್ತಾ: ಭಾರತದ ಸೀಮಿತ ಓವರ್ಗಳ ಆರಂಭಿಕ ಆಟಗಾರರಾದ ಶಿಖರ್ ಧವನ್, ರೋಹಿತ್ ಅವರೊಂದಿಗೆ ಇರುವ ವಿಶ್ವಾಸಾರ್ಹ ಅಂಶವೇ ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಯಶಸ್ವಿಯಾಗಲು ಕಾರಣವಂತೆ.
ಏಕದಿನ ಕ್ರಿಕೆಟ್ನಲ್ಲಿ ಭಾರತದ ಲೆಜೆಂಡ್ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ(21) ಅತಿ ಹೆಚ್ಚು ಶತಕಗಳ ಜೊತೆಯಾಟ ನಡೆಸಿದ್ದಾರೆ. ಅವರನ್ನು ಬಿಟ್ಟರೆ ಧವನ್ - ರೋಹಿತ್ ಜೋಡಿ 16 ಶತಕಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಹೇಡನ್ - ಗಿಲ್ಕ್ರಿಸ್ಟ್ ಜೋಡಿಯ ಜೊತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
"ನನಗೆ ರೋಹಿತ್ ಅಂಡರ್ 19 ದಿನಗಳಿಂದ ಗೊತ್ತಿದೆ. ಅವನು ನನಗೆ ಒಂದೆರೆಡು ವರ್ಷ ಜೂನಿಯರ್ ಮತ್ತು ನಾವಿಬ್ಬರು ಒಟ್ಟಿಗೆ ಕ್ಯಾಂಪ್ ಮಾಡಿದ್ದೇವೆ. ನಾವು ಒಬ್ಬರನ್ನೊಬ್ಬರು ನಂಬುತ್ತೇವೆ ಹಾಗೂ ನಮ್ಮಿಬ್ಬರಲ್ಲಿ ಉತ್ತಮ ಸ್ನೇಹ ಸಂಬಂಧವಿದೆ. ಅದು ನಮ್ಮ ನೆರವಿಗೆ ಬರುತ್ತದೆ" ಎಂದು ಧವನ್ ಡೆಲ್ಲಿ ಕ್ಯಾಪಿಟಲ್ ಜೊತೆ ನಡೆಸಿದ ಇನ್ಸ್ಟಾಗ್ರಾಂ ಲೈವ್ ಸಂವಾದದಲ್ಲಿ ತಿಳಿಸಿದ್ದಾರೆ.
"ನಾವಿಬ್ಬರೂ ಪರಸ್ಪರರ ಸ್ವಭಾವ ಮತ್ತು ನಡವಳಿಕೆಯನ್ನು ತಿಳಿದಿದ್ದೇವೆ. ಅವನು ಹೇಗೆ ಎಂಬುದು ನನಗೆ ತಿಳಿದಿದೆ. ನಾವು ಭಾರತಕ್ಕಾಗಿ ಕೆಲವು ಸಾಧನೆ ಮಾಡಿದ್ದೇವೆ ಎಂಬ ಹೆಮ್ಮೆಯ ಭಾವನೆಯಿದೆ" ಎಂದಿದ್ದಾರೆ.
ನಮ್ಮಿಬ್ಬರ ನಡುವೆ ಇರುವ ಮೈದಾನದ ಹೊರಗಿನ ಬಾಂಧವ್ಯ ಕೂಡ ನಮಗೆ ಅನುಕೂಲಕರವಾಗಿದೆ. ಇದರಿಂದ ನಿಮಗೆ ಸಕಾರಾತ್ಮಕ ಶಕ್ತಿ ಮತ್ತು ಕಂಪನಗಳನ್ನು ತರುತ್ತದೆ. ನನ್ನ ಬ್ಯಾಟಿಂಗ್ನಲ್ಲಿ ಸಮಸ್ಯೆ ಎದುರಾದಾಗಲೆಲ್ಲ ನಾನು ಅವನನ್ನು ಕೇಳುತ್ತೇನೆ. ನಮ್ಮಲ್ಲಿ ಬಲವಾದ ಸಂವಹನವಿದೆ. ನಾವು ವರ್ಷಕ್ಕೆ 230 ದಿನಗಳು ಒಟ್ಟಿಗೆ ಪ್ರಯಾಣಿಸುತ್ತೇವೆ. ಇದರಿಂದ ಇಡೀ ತಂಡ ಇಂದು ಕುಟುಂಬವಾಗಿದೆ" ಎಂದು ಧವನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಧವನ್ 7 ವರ್ಷಗಳ ಕಾಲ ಸನ್ರೈಸರ್ಸ್ ಪ್ರಾಂಚೈಸಿಯಲ್ಲಿದ್ದರು. ಕಳೆದ ವರ್ಷ ಅವರು ತಮ್ಮ ತವರು ತಂಡಕ್ಕೆ ಮರಳಿದ್ದರು. ಕಳೆದ ಆವೃತ್ತಿಯಲ್ಲಿ 16 ಪಂದ್ಯಗಳಿಂದ 521 ರನ್ ಬಾರಿಸಿದ್ದರು. ಇವರ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ನಲ್ಲಿ ಬದಲಾವಣೆ ಗಾಳಿ ಬೀಸಿತ್ತು. 7 ವರ್ಷಗಳಲ್ಲಿ ಮೊದಲ ಬಾರಿಗೆ ಪ್ಲೆ ಆಫ್ ತಲುಪಿದರೂ, ಕ್ವಾಲಿಫೈಯರ್ನಲ್ಲಿ ಸಿಎಸ್ಕೆ ವಿರುದ್ಧ ಸೋಲು ಕಾಣುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.
ಇದೀಗ ಧವನ್ ತಮ್ಮ ತಂಡಕ್ಕೆ ಐಪಿಎಲ್ ಟ್ರೋಫಿ ತಂದುಕೊಡುವ ಆಲೋಚನೆಯಲ್ಲಿದ್ದಾರೆ. " ನಾನು ಯಾವಾಗಲು ಐಪಿಎಲ್ ಗೆಲ್ಲುವ ಬಗ್ಗೆ ಆಲೋಚಿಸುತ್ತೇನೆ. ವಿಶೇಷವಾಗಿ ನಮ್ಮ ತಂಡ ಉತ್ತಮವಾಗಿದೆ. ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದೆ "ಎಂದು ಧವನ್ ಹೇಳಿದ್ದಾರೆ.
ನಾವು ಐಪಿಎಲ್ ಗೆದ್ದು ಟ್ರೋಫಿಯನ್ನು ಮನೆಗೆ ತರುತ್ತೇವೆ. ಅಭಿಮಾನಿಗಳು ನಿಜವಾಗಿಯೂ ಅದಕ್ಕೆ ಅರ್ಹರು. ಅವರೂ ಯಾವಾಗಲೂ ಕ್ರೀಡಾಂಗಣವನ್ನು ತುಂಬಿಸುತ್ತಾರೆ. ಟೂರ್ನಿಯುದ್ದಕ್ಕೂ ನಮಗೆ ಬೆಂಬಲ ನೀಡಿದ್ದಾರೆ. ನಾವು ಕಳೆದ ಆವೃತ್ತಿಯಲ್ಲಿ ತುಂಬಾ ಚೆನ್ನಾಗಿ ಆಡಿದ್ದೇವೆ. ಇಲ್ಲಿಂದ ಇನ್ನೂ ಉತ್ತಮಗೊಳ್ಳುತ್ತೇವೆ ಎಂದಿದ್ದಾರೆ.