ನವದೆಹಲಿ: ದೆಹಲಿ ತಂಡದ ಹಿರಿಯ ರಣಜಿ ಕ್ರಿಕೆಟ್ ಆಟಗಾರ ರಜತ್ ಭಾಟಿಯಾ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದ ರಜತ್ ಭಾಟಿಯಾ ರಣಜಿ ಕ್ರಿಕೆಟ್ನಲ್ಲಿ ದೆಹಲಿ, ತಮಿಳುನಾಡು ಹಾಗೂ ಉತ್ತರಾಖಂಡ ತಂಡಗಳ ಪರ ಆಡಿದ್ದರು. ಇವರು ಒಟ್ಟಾರೆ 112 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಂದ 17 ಶತಕಗಳ ಸಹಿತ 6,482 ರನ್ ಗಳಿಸಿದ್ದು , ಬೌಲಿಂಗ್ನಲ್ಲೂ ಕೂಡ137 ವಿಕೆಟ್ ಪಡೆದಿದ್ದಾರೆ. 119 ಲಿಸ್ಟ್ ಎ ಪಂದ್ಯಗಳಿಂದ 3,038 ರನ್, 146 ಟಿ20 ಪಂದ್ಯಗಳಿಂದ 1251 ರನ್ಗಳಿಸಿದ್ದಾರೆ.
1999/ 2000ರದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡದ ಪರ ಪದಾರ್ಪಣ ಮಾಡಿದ್ದ ಭಾಟಿಯಾ , ಆವೃತ್ತಿಯ ನಂತರ ತಮ್ಮ ತವರೂರಾದ ದೆಹಲಿ ತಂಡಕ್ಕೆ ಸೇರಿಕೊಂಡಿದ್ದರು. ಅವರು 2008ರ ರಣಜಿ ಚಾಂಪಿಯನ್ ಆದ ದೆಹಲಿ ತಂಡದಲ್ಲಿ ಆಡಿದ್ದರು. ಫೈನಲ್ ಪಂದ್ಯದಲ್ಲಿ ಅಜೇಯ ಶತಕ(139) ಸಿಡಿಸಿ ಟ್ರೋಫಿ ಗೆಲ್ಲಲು ನೆರವಾಗಿದ್ದರು. ನಂತರ ಕೆಲವು ಸಮಯ ರಾಜಸ್ಥಾನ್ ಹಾಗೂ ಉತ್ತರಾಖಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಐಪಿಎಲ್ನಲ್ಲೂ ಡೆಲ್ಲಿ ಡೇರ್ ಡೇವಿಲ್ಸ್, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರೈಸಿಂಗ್ ಪುಣೆ ಜೇಂಟ್ಸ್ ತಂಡದ ಪರ ಕಾಣಿಸಿಕೊಂಡಿದ್ದಾರೆ. ಇವರು 2012ರಲ್ಲಿ ಪ್ರಶಸ್ತಿ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಭಾಗವಾಗಿದ್ದರು. ಆ ಸೀಸನ್ನಲ್ಲಿ ಭಾಟಿಯ 12 ವಿಕೆಟ್ ಪಡೆದಿದ್ದರು. ಈ ಸಾದನೆಯಿಂದ ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ 1.7 ಕೋಟಿ ರೂ ನೀಡಿ ಖರೀದಿಸಿತ್ತು. ಇವರು ಒಟ್ಟಾರೆ 95 ಐಪಿಎಲ್ ಪಂದ್ಯಗಳಿಂದ 71 ವಿಕೆಟ್ ಪಡೆದಿದ್ದಾರೆ.