ಚೆನ್ನೈ: 3 ಬಾರಿ ಚಾಂಪಿಯನ್ ಆಗಿರುವ ಐಪಿಎಲ್ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ನ ದೌರ್ಬಲ್ಯವನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಡೀನ್ ಜೋನ್ಸ್ ಗುರುತಿಸಿದ್ದಾರೆ.
ಆಸೀಸ್ ಮಾಜಿ ಕ್ರಿಕೆಟಿಗನ ಪ್ರಕಾರ ಇಷ್ಟು ವರ್ಷಗಳ ಕಾಲ ಸಿಎಸ್‌ಕೆ ಯಶಸ್ಸಿನ ಒಂದು ಭಾಗವಾಗಿದ್ದ ಸುರೇಶ್ ರೈನಾ ಅನುಪಸ್ಥಿತಿ ತಂಡಕ್ಕೆ ಬಹುದೊಡ್ಡ ಹಿನ್ನಡೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಇತರೆ ತಂಡಗಳು ಟ್ರೋಫಿ ಗೆಲ್ಲಲು ತಂಡವನ್ನು ಬಲಿಷ್ಟಗೊಳಿಸುತ್ತಾ ಕಾಯುತ್ತಿದ್ದರೆ ಸಿಎಸ್ಕೆಗೆ ಮಾತ್ರ ಆರಂಭದಲ್ಲೇ ದೊಡ್ಡ ಹೊಡೆತಬಿದ್ದಿದೆ. ಐಪಿಎಲ್ನ ಎರಡನೇ ಗರಿಷ್ಠ ಸ್ಕೋರರ್ ಆಗಿರುವ ಆಲ್ ರೌಂಡರ್ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ ಶೋ 'ಗೇಮ್ ಪ್ಲ್ಯಾನ್'ನಲ್ಲಿ ಮಾತನಾಡಿರುವ ಅವರು ರೈನಾ ಅನುಪಸ್ಥಿತಿ ಖಂಡಿತ ಸಿಎಸ್‌ಕೆ ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ. ಏಕೆಂದರೆ ರೈನಾ ಐಪಿಎಲ್‌ನಲ್ಲಿ ಹೆಚ್ಚು ರನ್ಗಳಿಸಿರುವ ಟಾಪ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ರೈನಾ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಸ್ಪಿನ್ ಬೌಲಿಂಗ್ಗೆ ಅದ್ಭುತವಾಗಿ ಆಡುತ್ತಿದ್ದರು.
ಇನ್ನು ಸಿಎಸ್‌ಕೆ ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್ಗಳೇ ಇಲ್ಲದಂರಾಗಿದೆ. ಜಡೇಜಾರನ್ನು ಬಿಟ್ಟರೆ ಎಲ್ಲಾ ಪ್ರಮುಖ ಬ್ಯಾಟ್ಸ್ಮನ್ಗಳು ಬಲಗೈ ಬ್ಯಾಟ್ಸ್ಮನ್ಗಳಾಗಿದ್ದಾರೆ. ತಂಡದ ಸಂಯೋಜನೆ ಉತ್ತಮವಾಗಿರಬೇಕೆಂದರೆ ಎಡಗೈ ಬ್ಯಾಟ್ಸ್ಮನ್ಗಳ ಅವಶ್ಯಕತೆ ಇದೆ ಎಂದು ಜೋನ್ಸ್ ಹೇಳಿದ್ದಾರೆ.