ನವದೆಹಲಿ: ಎಂಟು ಫ್ರಾಂಚೈಸಿಗಳು ತಾವೂ ತಂಡದಲ್ಲಿ ಉಳಿಸಿಕೊಳ್ಳ ಬಯಸುವ ಆಟಗಾರರ ಹೆಸರ ಪಟ್ಟಿಯನ್ನು ಜನವರಿ 21 ರೊಳಗೆ ಸಲ್ಲಿಸಬೇಕೆಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಗುರುವಾರ ತಿಳಿಸಿದ್ದಾರೆ.
ಮುಂದಿನ ಐಪಿಎಲ್ಗೆ ಯೋಜನೆ ಮತ್ತು ತಯಾರಿ ನಡೆಸಿಕೊಳ್ಳುವ ಸಲುವಾಗಿ ಪಟೇಲ್ ಮತ್ತು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ಈ ವಾರದ ಆರಂಭದಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.
" ನಾವು ಜನವರಿ 21ರವರೆಗೆ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ನೀಡಿದ್ದೇವೆ. ಮತ್ತು ಪ್ರಾಂಚೈಸಿಗಳ ತಮ್ಮ ಆಟಗಾರರನ್ನು ಮಾರುವುದಕ್ಕೆ ಮತ್ತು ಕೊಂಡುಕೊಳ್ಳುವುದಕ್ಕಿರುವ ವ್ಯಾಪಾರದ ವಿಂಡೋ ಫೆಬ್ರವರಿ 4 ಮುಚ್ಚಲ್ಪಡುತ್ತದೆ " ಎಂದು ಟೀಮ್ ಇಂಡಿಯಾ ಮಾಜಿ ಟೆಸ್ಟ್ ಬ್ಯಾಟ್ಸ್ಮನ್ ಪಟೇಲ್ ಮಾಹಿತಿ ನೀಡಿದ್ದಾರೆ.
ಈಗಿರುವ ಎಂಟು ತಂಡಗಳಿಗೆ ಈ ವರ್ಷದ ಮಿನಿ ಹರಾಜು ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೆ 8 ತಂಡಗಳಿಗೂ ತಲಾ 85 ಕೋಟಿ ರೂ ಮೌಲ್ಯದ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಿದ್ದು, ಫ್ರಾಂಚೈಸಿಗಳು ಕೂಡ ಇದನ್ನು ಆನಂದಿಸುತ್ತಿವೆ. ಆದರೆ 2021ಕ್ಕೆ ಈ ಮೊತ್ತದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.
ಕಳೆದ ಹರಾಜಿನ ನಂತರ ಕೇವಲ 15 ಲಕ್ಷ ರೂ. ಮಾತ್ರ ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೆಚ್ಚು ಮೊತ್ತವನ್ನು ಕೂಡಿಸಿಕೊಳ್ಳುವುದಕ್ಕಾಗಿದೆ ದುಬಾರಿ ಆಟಗಾರರಾದ ಕೇದಾರ್ ಜಾಧವ್ ಮತ್ತು ಪಿಯೂಷ್ ಚಾವ್ಲಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇನ್ನು ಮುಂಬೈ ಇಂಡಿಯನ್ಸ್ ತನ್ನ ಬಹುಪಾಲು ಆಟಗಾರರನ್ನು ಉಳಿಸಿಕೊಳ್ಳಬಹುದು ಎನ್ನಲಾಗಿದೆ. ಏಕೆಂದರೆ ಇದು ಬಹಳ ಸಮತೋಲನ ತಂಡವಾಗಿದೆ. ಆದರೂ ತಮ್ಮ ಪರ್ಸ್ ಅನ್ನು 1.95 ಕೋಟಿ ರೂ.ಗಳಿಗಿಂತ ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಲವು ಆಟಗಾರರನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಉಳಿದಂತೆ ರಾಜಸ್ಥಾನದ ಬಳಿ 14.75 ಕೋಟಿ, ಸನ್ರೈಸರ್ಸ್ ಹೈದರಾಬಾದ್ ಬಳಿ 10.1 ಕೋಟಿ, ಡೆಲ್ಲಿ ಕ್ಯಾಪಿಟಲ್ ಬಳಿ 9, ಕೋಲ್ಕತ್ತಾ ನೈಟ್ ರೈಟ್ರೈಡರ್ಸ್ ಬಳಿ 8.5 ಕೋಟಿ ಹಾಗೂ ಆರ್ಸಿಬಿ ಬಳಿ 6.4 ಕೋಟಿ ರೂ. ಹಣವಿದ್ದು, ಮಿನಿ ಅಕಾಡದಲ್ಲಿ ವಿನಿಯೋಗಿಸಲು ಸಜ್ಜಾಗಿವೆ.
ಇದನ್ನು ಓದಿ:ರಿಷಭ್ ಪಂತ್ ಕಾಲ ಶೀಘ್ರದಲ್ಲೆ ಬರಲಿದೆ: ಡಿಸಿ ಕೋಚ್ ಪ್ರವೀಣ್ ಆಮ್ರೆ