ಹೈದರಾಬಾದ್: ಎರಡು ವಾರಗಳ ಹಿಂದೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಪಡೆದಿದ್ದ ಸಿಎಸ್ಕೆ ತಂಡದ ವೇಗಿ ದೀಪಕ್ ಚಹಾರ್ 14 ದಿನಗಳ ಕ್ವಾರಂಟೈನ್ ಮುಗಿಸಿದ್ದು, ಈ ವೇಳೆ 2 ಬಾರಿ ಟೆಸ್ಟ್ನಲ್ಲೂ ನೆಗೆಟಿವ್ ವರದಿ ಬಂದಿರುವುದರಿಂದ ಶೀಘ್ರದಲ್ಲೇ ಬಯೋಬಬಲ್ ಸೇರಿಕೊಳ್ಳಲಿದ್ದಾರೆ.
ಐಪಿಎಲ್ಗಾಗಿ ದುಬೈಗೆ ತೆರಳಿದ್ದ ವೇಳೆ ನಡೆಸಿದ್ದ ಕೋವಿಡ್ ಪರೀಕ್ಷೆಯಲ್ಲೇ ತಂಡದ ಸಹ ಆಟಗಾರ ಸೇರಿದಂತೆ ಒಟ್ಟು 13 ಮಂದಿಯ ಜೊತೆ ಚಹಾರ್ ಸಕರಾತ್ಮಕ ವರದಿ ಪಡೆದಿದ್ದರು. ಹೀಗಾಗಿ ಇವರೆಲ್ಲರನ್ನು ಆಟಗಾರರಿಂದ ಬೇರ್ಪಡಿಸಿ ಬೇರೊಂದು ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿತ್ತು.
ದೀಪಕ್ ಚಹಾರ್ ಎರಡು ಟೆಸ್ಟ್ನಲ್ಲೂ ನೆಗೆಟಿವ್ ಬಂದಿದ್ದು, ಅವರೂ ಬಯೋಬಬಲ್ನಲ್ಲಿರುವ ಸಿಎಸ್ಕೆ ತಂಡಕ್ಕೆ ಮರಳಲಿದ್ದಾರೆ ಎಂದು ಸಿಎಸ್ಕೆ ಸಿಎಒ ವಿಶ್ವನಾಥನ್ ಬುಧವಾರ ತಿಳಿಸಿದ್ದಾರೆ.
ದೀಪಕ್ ಚಹಾರ್ ಬಿಸಿಸಿಐ ಪ್ರೋಟೋಕಾಲ್ ಪ್ರಕಾರ, ಹೃದಯ ರಕ್ತನಾಳದ ಪರೀಕ್ಷೆಗೆ ಒಳಗಾಗಬೇಕಿದೆ. ಅದು ಅವರು ಚೇತರಿಸಿಕೊಂಡಿದ್ದಾರೆ ಎಂಬುದನ್ನು ಖಾತ್ರಿಪಡಿಸುತ್ತದೆ. ನಂತರ ಮತ್ತೊಂದು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಪಡೆದ ನಂತರ ಅವರು ತರಬೇತಿ ಆರಂಭಿಸಬಹುದು ಎಂದು ವಿಶ್ವನಾತನ್ ಹೇಳಿದ್ದಾರೆ.