ಗೋವಾ: ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಿರೂಪಕಿ ಸಂಜನಾ ಗಣೇಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಸದ್ದಿಲ್ಲದೆ ಗೋವಾದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಪ್ರಖ್ಯಾತ ಕ್ರೀಡಾ ನಿರೂಪಕಿ ಆಗಿರುವ ಸಂಜನಾ ಗಣೇಶನ್ 2014ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು. ಇದಾದ ಬಳಿಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕ್ರೀಡಾ ಕಾರ್ಯಕ್ರಮದ ನಿರೂಪಕಿಯಾಗಿ ಹೆಸರುವಾಸಿಯಾಗಿದ್ದಾರೆ. ಐಪಿಎಲ್, ಬ್ಯಾಡ್ಮಿಂಟನ್ ಲೀಗ್ಗಳ ನಿರೂಪಣೆ ಮಾಡುವ ಇವರು, 2019ರ ಕ್ರಿಕೆಟ್ ವಿಶ್ವಕಪ್ ವೇಳೆ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಜಸ್ಪ್ರೀತ್ ಬುಮ್ರಾ, ಐದು ವರ್ಷಗಳ ಬಳಿಕ ಮೂರೂ ಸ್ವರೂಪದ ಕ್ರಿಕೆಟ್ನಲ್ಲಿಯೂ ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್ನಿಂದ ರಜೆ ಪಡೆದ ಬುಮ್ರಾ, ಸದ್ಯ ಇಂಗ್ಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ರಜೆ ಪಡೆದುಕೊಂಡಿದ್ದಾರೆ.