ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಡೇ ಅಂಡ್ ನೈಟ್ ಟೆಸ್ಟ್ ಕೇವಲ 3 ದಿನದಲ್ಲೇ ಮುಗಿದಿದ್ದರಿಂದ ಕೊನೆಯ ಎರಡು ದಿನಗಳ ಟಿಕೆಟ್ ಹಣ ವಾಪಸ್ ನೀಡಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಭಾರತದ ಮೊದಲ ಡೇ ಅಂಡ್ ನೈಟ್ ಟೆಸ್ಟ್ನ ಕ್ರೀಡಾಂಗಣ ತುಂಬಿ ತುಳುಕಿತ್ತು. ಭಾರತದ ಮೊದಲ ಅಹರ್ನಿಸಿ ಟೆಸ್ಟ್ ಆದ್ದರಿಂದ ಪಂದ್ಯಕ್ಕೆ ವಾರವಿದ್ದಾಗಲೇ ಟಿಕೆಟ್ ಮಾರಾಟವಾಗಿದ್ದವು. ಆದರೆ ಭಾರತದ ಬೌಲಿಂಗ್ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಇನ್ನಿಂಗ್ಸ್ ಸೋಲು ಕಂಡಿತ್ತು.
ಕೊನೆ 2 ದಿನದ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರಿಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಹಣವನ್ನು ವಾಪಸ್ ನೀಡಲು ನಿರ್ಧರಿಸಿದೆ. ಈ ಹಿಂದೆ ಕ್ರಿಕೆಟ್ ಸಂಸ್ಥೆಗಳು ಮಳೆಯಿಂದ ಪಂದ್ಯ ರದ್ದಾದರೆ ಹಣ ವಾಪಸ್ ನೀಡುತ್ತಿದ್ದವು. ಆದ್ರೆ ಪಂದ್ಯ ಅವಧಿಗಿಂತ ಮೊದಲೇ ಮುಗಿದ ಹಿನ್ನೆಲೆ ಟಿಕೆಟ್ ಹಣ ಮರಳಿ ನೀಡಿರುವುದು ವಿರಳ. ಆದರೆ ಬಿಸಿಎ ಕೊನೆಯ 2 ದಿನದ ಹಣ ವಾಪಸ್ ನೀಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಆನ್ಲೈನ್ನಲ್ಲಿ ಬುಕ್ ಮಾಡಿದವರಿಗೆ ಸಂದೇಶದ ಮೂಲಕ ಟಿಕೆಟ್ ಮರುಪಾವತಿ ಬಗ್ಗೆ ತಿಳಿಸಲಾಗುವುದು. ಹಾಗೂ ಆಫ್ಲೈನ್ನಲ್ಲಿ ಟಿಕೆಟ್ ಕೊಂಡವರಿಗೆ ಅಸೋಸಿಯೇಷನ್ ಶೀಘ್ರದಲ್ಲೇ ಮಾಹಿತಿ ನೀಡಲಿದೆ.