ಟ್ರಿನಿಡಾಡ್: ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ಟಿಂಬಾಗೋ ನೈಟ್ ರೈಡರ್ಸ್ 19 ರನ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಜೇಯ ಓಟ ಮುಂದುವರೆಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟಿಕೆಆರ್ ತಂಡ ಕಾಲಿನ್ ಮನ್ರೊ(50), ಡೆರಾನ್ ಬ್ರಾವೋ(54) ಹಾಗೂ ಪೊಲಾರ್ಡ್ ಅವರ 41 ರನ್ಗಳ ನೆರವಿನಿಂದ 185 ರನ್ ಗಳಿಸಿತು. ಕಳೆದ ಎರಡು ಪಂದ್ಯದ ಹೀರೋ ನರೈನ್ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಬಾರ್ಬಡೋಸ್ ಪರ ಜೇಸನ್ ಹೋಲ್ಡರ್, ರೀಫೆರ್ ಹಾಗೂ ನರ್ಸ್ ತಲಾ ಒಂದು ವಿಕೆಟ್ ಪಡೆದರು.
186 ರನ್ಗಳ ಗುರಿ ಬೆನ್ನಟ್ಟಿದ ಬಾರ್ಬಡೋಸ್ ತಂಡ ಉತ್ತಮ ಆರಂಭ ಪಡೆಯಿತು. ಜಾನ್ಸನ್ ಚಾರ್ಲ್ಸ್ ಮತ್ತು ಶಾಯ್ ಹೋಪ್(36) ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿದರು. ಚಾರ್ಲ್ಸ್ 33 ಎಸೆತಗಳಲ್ಲಿ 3 ಸಿಕ್ಸರ್ಸ್ ಹಾಗೂ 4 ಬೌಂಡರಿ ಸಹಿತ 52 ರನ್ ಗಳಿಸಿದರು.
ಚಾರ್ಲ್ಸ್ ಔಟಾಗುತ್ತಿದ್ದಂತೆ ನಂತರ ಬಂದ ಕೋರೆ ಆ್ಯಂಡರ್ಸನ್(2), ಕೈಲ್ ಮೇಯರ್ಸ್(1), ಜೊನಾಥನ್ ಕಾರ್ಟರ್(8) ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿದರು.
ಆರಂಭಿಕನಾಗಿ ಕಣಕ್ಕಿಳಿದರೂ ರನ್ ಗಳಿಸಿಲೂ ಪರದಾಡಿದ ಹೋಪ್ 38 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ ಗಳಿಸಿ 16ನೇ ಓವರ್ನಲ್ಲಿ ಔಟಾದರು. ನಾಯಕ ಹೋಲ್ಡರ್ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ಸ್ ಸಹಿತ 34 ಹಾಗೂ ಆಶ್ಲೆ ನರ್ಸ್ 12 ಎಸೆತಗಳಲ್ಲಿ 21 ರನ್ ಸಿಡಿಸಿದರೂ ಗೆಲುವಿನ ದಡ ಮುಟ್ಟಲಿಲ್ಲ. ಕೊನೆಗೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 19 ರನ್ಗಳಿಂದ ಸೋಲೊಪ್ಪಿಕೊಂಡಿತು.
ಟಿಕೆಆರ್ ಪರ ಆಲಿಖಾನ್ 32ಕ್ಕೆ 1, ಖಾರಿ ಪೆರ್ರಿ 19ಕ್ಕೆ 1, ನರೈನ್ 17ಕ್ಕೆ 1, ಜೆಡನ್ ಸೀಲ್ಸ್ 34ಕ್ಕೆ 1 ಹಾಗೂ ಫವಾದ್ ಅಹ್ಮದ್ 14ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಡ್ವೇನ್ ಬ್ರಾವೋ 4 ಓವರ್ಗಳಲ್ಲಿ 46 ರನ್ ನೀಡಿ ದುಬಾರಿಯಾದರು.
ಮತ್ತೊಂದು ಪಂದ್ಯದಲ್ಲಿ ಸೇಂಟ್ ಲೂಸಿಯಾ ಜೌಕ್ಸ್ 10 ರನ್ಗಳಿಂದ ಗಯಾನ ಅಮೇಜಾನ್ ವಾರಿಯರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲೂಸಿಯಾ ಜೌಕ್ಸ್ 144 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಗಯಾನ 134 ರನ್ಗಳಿಸಲಷ್ಟೇ ಶಕ್ತವಾಗಿ 10 ರನ್ಗಳಿಂದ ಸೋಲೊಪ್ಪಿಕೊಂಡಿದೆ.