ಬೆಂಗಳೂರು: 11 ವರ್ಷಗಳ ಕಾಲ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಸಿಎಂ ಗೌತಮ್ ಮುಂಬರುವ ರಣಜಿ ಸೀಸನ್ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
2017 ರ ರಣಜಿ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಗೌತಮ್ರಿಗೆ ಕಳೆದ ರಣಜಿ ಸೀಸನ್ನಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಈ ವರ್ಷದಿಂದ ಗೋವಾ ರಣಜಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ನಡುವೆ ಕರ್ನಾಟಕ ಕ್ರಿಕೆಟ್ ಮಂಡಳಿಯಿಂದ ಒಪ್ಪಿಗೆ ಪತ್ರವನ್ನು ಅವರು ಪಡೆದುಕೊಂಡಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿರುವ ಗೌತಮ್ ಕರ್ನಾಟಕ ಪರ 94 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು,10 ಶತಕ ಮತ್ತು 24 ಅರ್ಧಶತಕಗಳ ನೆರವಿನಿಂದ 4,716 ರನ್‌ಗಳಿಸಿದ್ದಾರೆ. ವಿಕೆಟ್ ಕೀಪಿಂಗ್ನಲ್ಲೂ 295 ಕ್ಯಾಚ್ ಮತ್ತು 21 ಸ್ಟಂಪಿಂಗ್‌ಗಳೂ ಮಾಡಿದ್ದಾರೆ.
ಕಳೆದ ಸೀಸನ್ನಲ್ಲಿ ಗೋವಾ ತಂಡ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇದೀಗ ಗೌತಮ್ ಅವರಂತಹ ಅನುಭವಿಗಳು ತಂಡ ಸೇರ್ಪಡೆಗೊಂಡಿದ್ದಾರೆ. ಕಳೆದ ಸೀಸನ್ನಲ್ಲೂ ಕರ್ನಾಟಕದ ಅಮಿತ್ ವರ್ಮಾ ಕೂಡ ಗೋವಾ ತಂಡದ ಪರ ಆಡಿದ್ದರು. ಕನ್ನಡಿಗ ದೊಡ್ಡಗಣೇಶ್ ಕೋಚ್ ಆಗಿರುವ ಗೋವಾ ತಂಡಕ್ಕೆ ಉತ್ತಮ ಫಲಿತಾಂಶ ತಂದು ಕೊಡಲು ಪ್ರಯತ್ನಿಸುವುದಾಗಿ ಗೌತಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.