ಹೈದರಾಬಾದ್: ಕೆರಿಬಿಯನ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಝಾನ್ಸಿ ಸೂಪರ್ ಲೀಗ್ಗೆ (Mzansi Super League) ವಿದಾಯ ಘೋಷಿಸಿದ್ದಾರೆ.
ಟಿ-20 ಪಂದ್ಯಗಳಿಗೆ ಹೇಳಿ ಮಾಡಿಸಿದಂತಿರುವ ಗೇಲ್ ಬ್ಯಾಟಿಂಗ್ ವೈಖರಿ ಎಂಎಸ್ಎಲ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಮಂಕಾಗಿತ್ತು. ಇದೇ ಕಳಪೆ ಫಾರ್ಮ್ ಕಾರಣದಿಂದ ಗೇಲ್ ಸದ್ಯ ಎಂಎಸ್ಎಲ್ ಟೂರ್ನಿಗೆ ಗುಡ್ಬೈ ಹೇಳಿದ್ದಾರೆ.
ಎಂಎಸ್ಎಲ್ ಟೂರ್ನಿಯ ಆರು ಪಂದ್ಯಗಳಲ್ಲಿ ಗೇಲ್ ಕೇವಲ 101 ರನ್ ಮಾತ್ರವೇ ಗಳಿಸಲು ಶಕ್ತರಾಗಿದ್ದರು. ಕಳಪೆ ಫಾರ್ಮ್ ಗೇಲ್ ಬ್ಯಾಟಿಂಗ್ ಮೇಲೆ ಹೆಚ್ಚಿನ ಒತ್ತಡ ನೀಡಿತ್ತು ಎನ್ನಲಾಗಿದೆ.
ಬೇಸರ ಹೊರಹಾಕಿದ ಬ್ಯಾಟಿಂಗ್ ದೈತ್ಯ:
"ನಾನು ಸತತ ಎರಡು-ಮೂರು ಪಂದ್ಯ ಆಡದೇ ಇದ್ದ ತಕ್ಷಣ ಗೇಲ್ ತಂಡಕ್ಕೆ ಭಾರ ಎನ್ನುವ ಭಾವನೆ ಎಲ್ಲರಲ್ಲೂ ಬಂದಿರುತ್ತದೆ. ಇದು ಒಂದು ತಂಡ ಬಗ್ಗೆ ನಾನು ಹೇಳುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಆಡುತ್ತಿರುವ ಎಲ್ಲ ಟಿ-20 ಲೀಗ್ ಹಾಗೂ ಫ್ರಾಂಚೈಸಿ ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಕಳಪೆ ಫಾರ್ಮ್ನಲ್ಲಿದ್ದಾಗ ನನಗೆ ಕೊಂಚವೂ ಗೌರವ ದೊರೆಯುವುದೇ ಇಲ್ಲ. ಆ ವೇಳೆ, ನನ್ನ ಹಿಂದಿನ ಎಲ್ಲ ದಾಖಲೆಗಳು ಮರೆತು ಹೋಗಿರುತ್ತದೆ. ಗೇಲ್ ರನ್ ಗಳಿಸಿಲ್ಲ ಎಂದಾಕ್ಷಣವೇ ಆತನ ಕರಿಯರ್ ಮುಗಿಯಿತು ಎನ್ನುವ ಮಾತು ಬಂದಿರುತ್ತದೆ. ಅದರೆ ಇಂತಹ ಮಾತು ಹಾಗೂ ಘಟನೆಯಲ್ಲಿ ಬದುಕಿದ್ದೇನೆ ಮತ್ತು ಅದರಿಂದ ಈಗ ಹೊರಬಂದಿದ್ದೇನೆ" ಎಂದು ಕ್ರಿಸ್ ಗೇಲ್ ವಿದಾಯದ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮನದಾಳದ ನೋವನ್ನು ಹೊರಹಾಕಿದ್ದಾರೆ.